Sunday, December 3, 2023

Latest Posts

ಮಡಿಕೇರಿ ದಸರಾ ಶೋಭಾಯಾತ್ರೆಯಲ್ಲಿ‌‌‌ ಅವಘಡ: ಮಂಟಪದ‌ ಟ್ರ್ಯಾಕ್ಟರ್ ಮಗುಚಿ ಮೂವರಿಗೆ ಗಾಯ

ಹೊಸದಿಗಂತ ವರದಿ ಮಡಿಕೇರಿ:

ಸುಮಾರು 150 ಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಮಡಿಕೇರಿ ದಸರಾದ ದಶಮಂಟಪಗಳ ಶೋಭಾಯಾತ್ರೆಯ ವೇಳೆ ಇದೇ ಪ್ರಥಮ ಬಾರಿಗೆ ಅವಘಡ ಸಂಭವಿಸಿದೆ.
ದಶಮಂಟಪಗಳ ಶೋಭಾಯಾತ್ರೆ ವೇಳೆ ಮಂಟಪವೊಂದರ ಟ್ರ್ಯಾಕ್ಟರ್ ಮಗುಚಿಕೊಂಡ ಪರಿಣಾಮ ಮೂವರಿಗೆ ಗಾಯಗಳಾಗಿವೆ.

ಪೇಟೆ ಶ್ರೀರಾಮ ಮಂದಿರದ ಮಂಟಪದ ಚಲನೆಯೊಂದಿಗೆ ಶೋಭಾಯಾತ್ರೆ ಆರಂಭಗೊಂಡ ಬಳಿಕ ನಗರದ ರಾಜಾಸೀಟ್ ಬಳಿಯ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಮಂಟಪದ ಮೆರವಣಿಗೆ ಆರಂಭಗೊಂಡಿತು. ಆದರೆ ಈ ಮಂಟಪ ಗಾಂಧಿಮೈದಾನವನ್ನು‌ ಹಾದು ಕೊಡಗು ಜಿಲ್ಲಾ ಸಹಕಾರ ಕೇಂದ್ರ (ಕೆಡಿಸಿಸಿ) ಬ್ಯಾಂಕ್ ಎದುರಿನ ಇಳಿಜಾರು ರಸ್ತೆಯಲ್ಲಿ ಬರುತ್ತಿದ್ದಂತೆ ಮಂಟಪವನ್ನು ಹೊತ್ತೊಯ್ಯುತ್ತಿದ್ದ‌ ಟ್ರ್ಯಾಕ್ಟರ್ ಮಗುಚಿಕೊಂಡಿದೆ.

ಬುಧವಾರ ಬೆಳಗಿನ ಜಾವ 3.30ರ‌ ವೇಳೆಗೆ ಈ ದುರ್ಘಟನೆ ನಡೆದಿದ್ದು, ಮಡಿಕೇರಿ ದಸರಾ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಇಂತಹದ್ದೊಂದು ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಅಂಬ್ಯುಲೆನ್ಸ್ ತರಿಸಿ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ದೇಗುಲದ ಸಮೀಪ ಹಾಗೂ ಮೆರವಣಿಯಲ್ಲಿ ಎರಡು ಪ್ರದರ್ಶನ ನೀಡಿದ್ದ ಚೌಟಿ ಮಾರಿಯಮ್ಮ ದೇವಾಲಯದ ಮಂಟಪ ಬೆಳಗ್ಗೆ 4 ಗಂಟೆಗೆ ಪುರಸಭೆಯ ಬಳಿ ತೀರ್ಪುಗಾರರ ಮುಂದೆ ಪ್ರದರ್ಶನ ನೀಡಬೇಕಿತ್ತು. ಆದರೆ ಆ ಸ್ಥಳ ತಲುಪುವ ಮುನ್ನ ಟ್ರಾಕ್ಟರ್ ಮುಗುಚಿದ ಪರಿಣಾಮ ಈ ಮಂಟಪ ಸ್ಪರ್ಧೆಯಿಂದ ಹೊರಗುಳಿಯುವಂತಾಯಿತು.

ಈ ಘಟನೆಯಿಂದ ಸ್ಥಳದಲ್ಲಿ ಭಾರೀ ನೂಕುನುಗ್ಗಲು ಉಂಟಾಯಿತಲ್ಲದೆ, ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಜನರು ಪರದಾಡುವಂತಾಯಿತು. ಟ್ರ್ಯಾಕ್ಟರ್ ಎಡಗಡೆಗೆ ಮಗುಚಿಕೊಂಡಿದ್ದರಿಂದ ನಡೆಯಲಿದ್ದ ಭಾರೀ ಅನಾಹುತ ತಪ್ಪಿದ್ದು, ಬಲಗಡೆಗೆ ಮಗುಚಿಕೊಂಡಿದ್ದಲ್ಲಿ ಭಾರೀ ಸಾವುನೋವುಗಳಾಗುವ ಸಂಭವವಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!