July 11, 2026
Saturday, July 11, 2026
spot_img

ತುಟಿಗೆ ಬಿದ್ದ ಏಟಿಗೆ ಹೊಲಿಗೆ ಹಾಕೋಕೆ ಹೋಗಿ ಅನಾಹುತ: ಕಂದನ ಜೀವ ಪಡೆದ ಅನಸ್ತೇಶಿಯಾ ಡೋಸ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೈದ್ಯರು ನೀಡಿದ ಅನಸ್ತೇಶಿಯಾದಿಂದ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ಕಣ್ಣೂರಿನ ಎರಮಮ್‌- ಕುಟ್ಟೂರ್‌ ನಿವಾಸಿಗಳಾದ ಸೂರಜ್‌ ಹಾಗೂ ವಿಜಿಶಾ ದಂಪತಿಯ ಕಂದ ದೇವಾಂಶ್‌ ಶೌರ್ಯ ಆಟವಾಡುವಾಗ ಬಿದ್ದು ತುಟಿಗೆ ಗಾಯ ಮಾಡಿಕೊಂಡಿದ್ದ.

ಕೂಡಲೇ ಪೋಷಕರು ಮಗುವನ್ನುಮಠಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದರು. ಗಾಯ ದೊಡ್ಡದಿರುವ ಕಾರಣ ಮಗುವನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಲಿಗೆ ಹಾಕುವ ಮುನ್ನ ಮಗುವಿಗೆ ಅನಸ್ತೇಶಿಯಾ ನೀಡಿದ್ದು, ಮಗು ತಕ್ಷಣವೇ ಕುಸಿದುಬಿದ್ದಿದೆ.

ನಂತರ ಮಗುವನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ನಿನ್ನೆ ರಾತ್ರಿ ಕೊನೆಯುಸಿರೆಳೆದಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ ಮಗುವಿಗೆ ಅನಸ್ತೇಶಿಯಾ ಕೊಟ್ಟ ತಕ್ಷಣ ಅನಿರೀಕ್ಷಿತವಾಗಿ ಹಾರ್ಟ್‌ ಅಟ್ಯಾಕ್‌ ಆಗಿದೆ. ನಾವು ಬದುಕಿಸುವ ಎಲ್ಲ ಪ್ರಯತ್ನ ಮಾಡಿದ್ದೇವೆ. ಎಲ್ಲಾ ನಿಯಮಗಳನ್ನು ಪಾಲಿಸಿದ್ದೇವೆ. ಕೆಲವೊಮ್ಮೆ ಇಂತಹ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ ಎಂದು ಆಸ್ಪತ್ರೆ ಹೇಳಿದೆ.

ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮಗುವಿನ ಪೋಷಕರು ಇದು ವೈದ್ಯಕೀಯ ನಿರ್ಲಕ್ಷ್ಯ ಎಂದು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಸಂಬಂಧಪಟ್ಟ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅರಿವಳಿಕೆ ನೀಡುವಲ್ಲಿ ಪ್ರಮಾಣ ಮೀರಿದೆಯೇ ಅಥವಾ ಇತರ ಯಾವುದಾದರೂ ಲೋಪವಾಗಿದೆಯೇ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಂಶ ಹೊರಬರಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !