August 4, 2026
Tuesday, August 4, 2026
spot_img

‘ಸಾರಿ ಅಶ್ವಿನ್ ಭಾಯ್..!’ ಟಾಪ್-5 ಆಯ್ಕೆ ಬಳಿಕ ದಿಗ್ಗಜ ಸ್ಪಿನ್ನರ್‌ಗೆ ಕ್ಷಮೆ ಕೇಳಿದ ಅರ್ಷದೀಪ್ ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಒಂದು ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಮ್ಮ ನೆಚ್ಚಿನ ಟಾಪ್-5 ಭಾರತೀಯ ಬೌಲರ್‌ಗಳ ಪಟ್ಟಿಯನ್ನು ಬಹಿರಂಗಪಡಿಸಿದ ವೇಳೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಕೊನೆಯ ಸ್ಥಾನ ನೀಡಿದ್ದಕ್ಕಾಗಿ ಅರ್ಷದೀಪ್ ಸಾರ್ವಜನಿಕವಾಗಿಯೇ ಕ್ಷಮೆಯಾಚಿಸಿದ್ದು, ಅವರಿಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸುವುದಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಅರ್ಷದೀಪ್ ಆಯ್ಕೆ ಮಾಡಿದ ಟಾಪ್-5 ಬೌಲರ್‌ಗಳು

ಸಂದರ್ಶನದಲ್ಲಿ ನಿರೂಪಕರು ಭಾರತದ ನೆಚ್ಚಿನ ಐವರು ಬೌಲರ್‌ಗಳನ್ನು ಕ್ರಮವಾಗಿ ಹೆಸರಿಸುವಂತೆ ಕೇಳಿದಾಗ, ಅರ್ಷದೀಪ್ ಮೊದಲ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಿದರು. ನಂತರ ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಲ್ ಅವರಿಗೆ ಕ್ರಮವಾಗಿ ಸ್ಥಾನ ನೀಡಿದರು. ಕೊನೆಯ ಸ್ಥಾನಕ್ಕೆ ರವಿಚಂದ್ರನ್ ಅಶ್ವಿನ್ ಅವರ ಹೆಸರನ್ನು ಸೇರಿಸಿದರು.

ಅಶ್ವಿನ್‌ಗೆ ಕ್ಷಮೆಯಾಚಿಸಿದ ಅರ್ಷದೀಪ್

ಅಶ್ವಿನ್ ಅವರಂತಹ ದಿಗ್ಗಜ ಬೌಲರ್‌ಗೆ ಕೊನೆಯ ಸ್ಥಾನ ನೀಡಿರುವುದು ಗಮನಕ್ಕೆ ಬಂದ ತಕ್ಷಣ ಅರ್ಷದೀಪ್ ನಗುತ್ತಲೇ ಕ್ಷಮೆಯಾಚಿಸಿದರು. “ಅಶ್ವಿನ್ ಭಾಯ್ ಅವರನ್ನು ಈ ಸ್ಥಾನದಲ್ಲಿ ಇಡಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ. ಬೇರೆ ಸ್ಥಾನ ಉಳಿದಿರಲಿಲ್ಲ. ಕ್ಷಮಿಸಿ, ನಾನು ನಿಮಗೆ ವೈಯಕ್ತಿಕವಾಗಿ ಮೆಸೇಜ್ ಮಾಡುತ್ತೇನೆ” ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.

ಇದನ್ನೂ ಓದಿ:

ಐಪಿಎಲ್‌ನಿಂದ ಆರಂಭವಾದ ಬಾಂಧವ್ಯ

2019ರಲ್ಲಿ ಪಂಜಾಬ್ ಕಿಂಗ್ಸ್ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗ ರವಿಚಂದ್ರನ್ ಅಶ್ವಿನ್ ಅವರೇ ತಮ್ಮ ಮೊದಲ ನಾಯಕ ಎಂದು ಅರ್ಷದೀಪ್ ನೆನಪಿಸಿಕೊಂಡರು. ಅಶ್ವಿನ್ ಅವರಿಂದ ಸಾಕಷ್ಟು ಕಲಿತಿರುವುದಾಗಿ ಹೇಳಿದ ಅವರು, ತಮ್ಮ ಮಾತುಗಳನ್ನು ಯಾರೂ ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂಬ ಉದ್ದೇಶದಿಂದಲೇ ಕ್ಷಮೆಯಾಚಿಸಿರುವುದಾಗಿ ತಿಳಿಸಿದರು.

ವಿಡಿಯೋಗೆ ಭಾರಿ ಮೆಚ್ಚುಗೆ

ಅರ್ಷದೀಪ್ ಸಿಂಗ್ ಅವರ ಸರಳತೆ, ಹಿರಿಯ ಆಟಗಾರರ ಮೇಲಿನ ಗೌರವ ಹಾಗೂ ವಿನಯಪೂರ್ಣ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ಸಾವಿರಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅಶ್ವಿನ್ ಮೇಲಿನ ಅವರ ಗೌರವವನ್ನು ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !