October 8, 2026
Thursday, October 8, 2026
spot_img

ಆನ್‌ಲೈನ್ ಗೇಮ್‌ ಹೆಸರಿನಲ್ಲಿ ಹಣ ಸುಲಿಗೆ ಆರೋಪ: ಎಂಟನೇ ತರಗತಿ ವಿದ್ಯಾರ್ಥಿ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಗೇಮ್‌ಗಳ ಮೇಲಿನ ಅತಿಯಾದ ವ್ಯಾಮೋಹ ಮಕ್ಕಳ ಬದುಕಿನ ಮೇಲೆಯೇ ಗಂಭೀರ ಪರಿಣಾಮ ಬೀರುತ್ತಿರುವ ಆತಂಕಕಾರಿ ಬೆಳವಣಿಗೆಗಳ ನಡುವೆ ದಾವಣಗೆರೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

ಉಚಿತವಾಗಿ ‘ಫ್ರೀ ಫೈರ್’ ಗೇಮ್‌ ಐಡಿ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕನಿಂದ ಹಂತ ಹಂತವಾಗಿ ಹಣ ಪಡೆದುಕೊಂಡ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದ 13 ವರ್ಷದ ಎಂಟನೇ ತರಗತಿ ವಿದ್ಯಾರ್ಥಿ ಈ ದುರಂತಕ್ಕೆ ಬಲಿಯಾಗಿದ್ದಾನೆ. ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನಿಗೆ ಪರಿಚಯವಿದ್ದ ಕೆಲವರು ಗೇಮ್‌ ಐಡಿ ಹಾಗೂ ಅದರ ಮಟ್ಟವನ್ನು ಹೆಚ್ಚಿಸುವುದಾಗಿ ಹೇಳಿ ಹಣ ಪಡೆದಿದ್ದಾರೆ ಎನ್ನಲಾಗಿದೆ.

ಪೋಷಕರಿಗೆ ತಿಳಿಯದಂತೆ ಹಣ ನೀಡಿದ್ದ ಬಾಲಕ

ಆರಂಭದಲ್ಲಿ ಕೆಲವರು ಬಾಲಕನಿಂದ 6 ಸಾವಿರ ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಬಳಿಕ ಗೇಮ್‌ ಐಡಿ ಇನ್ನಷ್ಟು ಉನ್ನತ ಹಂತಕ್ಕೆ ತಲುಪಿದೆ ಎಂದು ನಂಬಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹಂತ ಹಂತವಾಗಿ ಬಾಲಕನಿಂದ ಸುಮಾರು 4 ಲಕ್ಷ ಹಣವನ್ನು ಪಡೆದುಕೊಂಡಿದ್ದು, ಮತ್ತೊಂದು 11 ಸಾವಿರವನ್ನು ಡಿಜಿಟಲ್ ಪಾವತಿ ಮೂಲಕ ವರ್ಗಾಯಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ. ಈ ಹಣವನ್ನು ಬಾಲಕ ತನ್ನ ಪೋಷಕರಿಗೆ ತಿಳಿಯದಂತೆ ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:

ವಿಷಯ ಪೋಷಕರ ಗಮನಕ್ಕೆ ಬಂದ ಬಳಿಕ ಬಾಲಕನಿಗೆ ಸಮಾಧಾನ ಹೇಳಿ ಧೈರ್ಯ ತುಂಬಲು ಪ್ರಯತ್ನಿಸಲಾಗಿತ್ತು. ಆದರೆ ಕೆಲವೇ ಸಮಯದ ಬಳಿಕ ಆತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ತಿಳಿದು ಗ್ರಾಮಸ್ಥರು ಆರೋಪಿಗಳೆಂದು ಶಂಕಿಸಲಾದ ಐವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕನ ತಂದೆ ನೀಡಿದ ದೂರಿನ ಆಧಾರದ ಮೇಲೆ ಚನ್ನಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಣದ ವ್ಯವಹಾರ, ಗೇಮ್‌ ಐಡಿ ಹೆಸರಿನಲ್ಲಿ ನಡೆದಿರುವ ವಂಚನೆ ಹಾಗೂ ಬಾಲಕನ ಮೇಲೆ ಯಾವುದೇ ರೀತಿಯ ಒತ್ತಡ ಅಥವಾ ಬೆದರಿಕೆ ಹೇರಲಾಗಿತ್ತೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Must Read