ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ನಟ ಶೀಜನ್ ಖಾನ್ ಅವರಿಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಂಗ ಬಂಧನದಲ್ಲಿರುವ 28 ವರ್ಷದ ಶೀಜನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಡಿ.ದೇಶಪಾಂಡೆ ಅವರು, 1,00,000 ರೂ. ಶ್ಯೂರಿಟಿ ಮೇಲೆ ಆರೋಪಿಗೆ ಜಾಮೀನು ನೀಡಿದ್ದಾರೆ.
ನಟನಿಗೆ ಪಾಸ್ಪೋರ್ಟ್ ಒಪ್ಪಿಸುವಂತೆ ಕೋರ್ಟ್ ಆದೇಶ ನೀಡಿದ್ದು, ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯದೆ ದೇಶ ತೊರೆಯದಂತೆ ಸೂಚಿಸಿದೆ.
ಡಿಸೆಂಬರ್ 24, 2022 ರಂದು ಪಾಲ್ಘರ್ನ ವಾಲಿವ್ ಬಳಿ ಟಿವಿ ಧಾರಾವಾಹಿಯ ಸೆಟ್ನಲ್ಲಿ ತುನಿಶಾ ಶರ್ಮಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಶರ್ಮಾ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ನಟ ಶೀಜನ್ ಖಾನ್ಅವರನ್ನು ಮರುದಿನ ಬಂಧಿಸಲಾಗಿತ್ತು.