September 2, 2026
Wednesday, September 2, 2026
spot_img

ರಾಷ್ಟ್ರ ಪ್ರಶಸ್ತಿ ಗೆದ್ದ ಸಂಭ್ರಮದಲ್ಲಿ ನಟಿ ಯಾಮಿ ಗೌತಮ್: ಭಾವುಕ ಪೋಸ್ಟ್ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಪ್ರತಿಷ್ಠಿತ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಜುಲೈ 18ರಂದು ಅಧಿಕೃತವಾಗಿ ಹೊರಬಿದ್ದಿದ್ದು, ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ ‘ಆರ್ಟಿಕಲ್ 370’ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಇದೇ ಚಿತ್ರದ ಅದ್ಭುತ ನಟನೆಗಾಗಿ ಜನಪ್ರಿಯ ನಟಿ ಯಾಮಿ ಗೌತಮ್ ಅವರಿಗೆ ‘ಅತ್ಯುತ್ತಮ ನಟಿ’ ಗೌರವ ಒಲಿದುಬಂದಿದೆ.

ನಟಿ ಯಾಮಿ ಗೌತಮ್ ಭಾವುಕ ಪೋಸ್ಟ್

ತಮ್ಮ ಸಿನಿ ಪಯಣದ ಈ ಐತಿಹಾಸಿಕ ಸಾಧನೆಯ ಬೆನ್ನಲ್ಲೇ ನಟಿ ಯಾಮಿ ಗೌತಮ್ ಅವರು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಾರೆ. “ಪ್ರತಿಯೊಬ್ಬರ ಜೀವನದಲ್ಲೂ ಸೋಲೊಪ್ಪಿಕೊಳ್ಳಬಾರದು ಎಂದು ನೆನಪಿಸುವ ಒಂದು ಮಹತ್ತರ ಕ್ಷಣ ಎದುರಾಗುತ್ತದೆ. ಇಂದು ನನ್ನ ಪಾಲಿಗೆ ಅಂತಹದ್ದೇ ಸುವರ್ಣ ದಿನ. ‘ಆರ್ಟಿಕಲ್ 370’ ಚಿತ್ರದ ರಾಷ್ಟ್ರ ಪ್ರಶಸ್ತಿ ಸಾಧನೆ ನನ್ನ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

14 ವರ್ಷಗಳ ತಪಸ್ಸಿಗೆ ಸಿಕ್ಕ ಪ್ರತಿಫಲ

“ಕಳೆದ 14 ವರ್ಷಗಳಿಂದ ಚಿತ್ರರಂಗದಲ್ಲಿ ಕೇವಲ ನನ್ನ ನಟನೆಯನ್ನೇ ನಂಬಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ನನ್ನ ಕಠಿಣ ಪರಿಶ್ರಮವೇ ಮಾತನಾಡಲಿ ಎಂದು ಕಾಯುತ್ತಿದ್ದೆ. ಈ ಅತ್ಯುನ್ನತ ಗೌರವವು ನನ್ನ ಅಚಲವಾದ ಭರವಸೆ ಮತ್ತು ಸಿನಿಮಾ ಮೇಲಿನ ಪ್ರೀತಿಗೆ ಸಂದ ಜಯವಾಗಿದೆ. ಇದು ನನ್ನ ಬಹುಕಾಲದ ಕನಸಾಗಿದ್ದು, ಇಂದು ಅತ್ಯಂತ ವಿನಮ್ರತೆಯಿಂದ ಸ್ವೀಕರಿಸುತ್ತಿದ್ದೇನೆ” ಎಂದಿದ್ದಾರೆ ಯಾಮಿ.

ವೈಯಕ್ತಿಕವಾಗಿ ಕಾಡಿದ ಸಿನಿಮಾ

ಕೊನೆಯದಾಗಿ, “ಆರ್ಟಿಕಲ್ 370 ಕೇವಲ ನಟನೆಯಾಗಿರಲಿಲ್ಲ, ಅದು ನಾನು ಹೃದಯಪೂರ್ವಕವಾಗಿ ನಂಬಿದ ಕಥೆ. ಅದೂ ಅಲ್ಲದೆ, ಇದು ನಮ್ಮದೇ ಸ್ವಂತ ಬ್ಯಾನರ್‌ನ (ಹೋಮ್ ಪ್ರೊಡಕ್ಷನ್) ಚಿತ್ರವಾಗಿರುವುದರಿಂದ ಈ ಪ್ರಶಸ್ತಿ ನನಗೆ ತುಂಬಾನೇ ಸ್ಪೆಷಲ್ ಹಾಗೂ ವೈಯಕ್ತಿಕವಾಗಿದೆ. ಶೂಟಿಂಗ್ ವೇಳೆ ಎದುರಾದ ಎಲ್ಲಾ ಸವಾಲುಗಳ ಹಿಂದೆ ಪ್ರಾಮಾಣಿಕವಾಗಿ ಕಥೆ ಹೇಳುವ ಉದ್ದೇಶ ಮಾತ್ರ ಇತ್ತು” ಎಂದು ಯಾಮಿ ಗೌತಮ್ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !