October 16, 2026
Friday, October 16, 2026
spot_img

ಚುನಾವಣೆ ಸೋಲಿನ ಬೆನ್ನಲ್ಲೇ ಪಿಣರಾಯಿಗೆ ಮತ್ತೊಂದು ಶಾಕ್‌ : ಸಿಎಂಆರ್‌ಎಲ್‌ ಡೀಲ್‌ ಕೇಸ್‌ನಲ್ಲಿ ಇಡಿ ಎಂಟ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇರಳ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಸಿಪಿಐ(ಎಂ) ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಇಂದು ಮುಂಜಾನೆಯಿಂದಲೇ ದಾಳಿ ಆರಂಭಿಸಿದೆ. ಕಣ್ಣೂರು ಮತ್ತು ತಿರುವನಂತಪುರಂನಲ್ಲಿರುವ ವಿಜಯನ್ ನಿವಾಸ ಸೇರಿದಂತೆ ಕೇರಳದಾದ್ಯಂತ ಒಟ್ಟು 12 ಪ್ರಮುಖ ಸ್ಥಳಗಳಲ್ಲಿ ಅಧಿಕಾರಿಗಳ ತಂಡ ಮ್ಯಾರಾಥಾನ್ ಸರ್ಚ್ ಆಪರೇಷನ್ ನಡೆಸುತ್ತಿದೆ.

ಮಗಳ ಕಂಪನಿ ಮೇಲಿನ ಆರೋಪ
ಪಿಣರಾಯಿ ವಿಜಯನ್ ಮಗಳು ಟಿ. ವೀಣಾ ಒಡೆತನದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’ ಕಂಪನಿಯು, ‘ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್’ (CMRL) ಎಂಬ ಖಾಸಗಿ ಮೈನಿಂಗ್ ಕಂಪನಿಯಿಂದ ಯಾವುದೇ ಸೇವೆ ನೀಡದೆಯೇ ಕೋಟ್ಯಂತರ ರೂ. ಮಾಸಿಕ ಸಂಭಾವನೆ ಪಡೆದಿದೆ ಎಂಬ ಗಂಭೀರ ಆರೋಪವಿದೆ.

ಈ ವ್ಯವಹಾರವು ರಾಜಕೀಯ ಪ್ರಭಾವ ಬಳಸಿ ನಡೆಸಿರುವ ಅಕ್ರಮ ಹಣ ವರ್ಗಾವಣೆ ಎಂದು ಶಂಕಿಸಲಾಗಿದ್ದು, ಇಡಿ ಅಧಿಕಾರಿಗಳು ದಾಖಲೆಗಳ ಪರಾಮರ್ಶೆ ನಡೆಸುತ್ತಿದ್ದಾರೆ. ಪಿಣರಾಯಿ ವಿಜಯನ್ ಅಳಿಯ ಹಾಗೂ ಮಾಜಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಕೋಝಿಕೋಡ್ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಕೀಯ ಹೈಡ್ರಾಮಾ
ಇತ್ತೀಚೆಗಷ್ಟೇ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಈ ದಾಳಿ ನಡೆದಿರುವುದು ಸಿಪಿಐ(ಎಂ) ಪಾಳಯದಲ್ಲಿ ಆತಂಕ ಮೂಡಿಸಿದೆ. ಈ ಇಡಿ ದಾಳಿಯು ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಮಾಜಿ ಸಿಎಂ ಅವರ ವರ್ಚಸ್ಸಿಗೆ ಧಕ್ಕೆ ತರಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಎಡರಂಗದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ

Must Read