ʼಲಾಲ್‌ ಸಿಂಗ್‌ ಚಡ್ಡಾʼ ಫ್ಲಾಫ್‌ ಎಫೆಕ್ಟ್:‌ ಅಮೀರ್‌ ಖಾನ್‌ ಮುಂದಿನ ಚಿತ್ರ ʼಮೊಗುಲ್‌ʼ ಸ್ಥಗಿತ!

ಹೊಸಗಂತ ಡಿಜಿಟಲ್‌ ಡೆಸ್ಕ್
ಇತ್ತೀಚೆಗೆ ತೆರೆಕಂಡ ʼಲಾಲ್‌ ಸಿಂಗ್‌ ಚಡ್ಡಾʼ ಅಮೀರ್‌ ಖಾನ್‌ ಕೆರಿಯರ್‌ನ ಫ್ಲಾಫ್‌ ಚಿತ್ರ ಎನಿಸಿಕೊಂಡಿದೆ. ಬಾಕ್ಸ್‌ ಆಫೀಸ್‌ ನಲ್ಲಿ ಲಾಲ್‌ ಸಿಂಗ್..‌ ದಯನೀಯ ಸೋಲು ಅಮೀರ್‌ ರ ಮುಂದಿನ ಚಿತ್ರಗಳ ಮೇಲೆ ಪರಿಣಾಮ ಬೀರುತ್ತಿದೆ.  ಭಾರತದ ಅತಿದೊಡ್ಡ ಸಂಗೀತ ಕಂಪನಿಯಾದ ಟಿ-ಸೀರೀಸ್ ತನ್ನ ಮುಂಬರುವ ಪ್ರಾಜೆಕ್ಟ್ ಗುಲ್ಶನ್ ಕುಮಾರ್ ರ ಜೀವನ ಚರೀತ್ರೆ ಆಧಾರಿತ ‘ಮೊಗಲ್’ ಅನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಖಾನ್ ಟಿ- ಸೀರಿಸ್‌ ಸಂಸ್ಥಾಪಕ ಗುಲ್ಶನ್ ಕುಮಾರ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ‘ಲಾಲ್ ಸಿಂಗ್ ಚಡ್ಡಾ’ ವಿಫಲವಾದ ನಂತರ, ‘ಮೊಗಲ್’ ನಿರ್ದೇಶಕ ಸುಭಾಷ್ ಕಪೂರ್ ಅವರು ಚಲನಚಿತ್ರವನ್ನು ಕೈಬಿಡಲು ನಿರ್ಧರಿಸಿ, ಅವರ ಮುಂದಿನ ಚಿತ್ರ ‘ಜಾಲಿ LLB 3’ ನಿರ್ದೇಶನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವರದಿಗಳ ಪ್ರಕಾರ, ಟಿ-ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಪುತ್ರ ಭೂಷಣ್ ಕುಮಾರ್ ಅವರು ತಮ್ಮ ತಂದೆಯ ಸ್ಪೂರ್ತಿದಾಯಕ ಕಥೆಯನ್ನು ಮೊಗಲ್ ಮೂಲಕ ಬೆಳ್ಳಿತೆರೆಗೆ ತರಲು ಉತ್ಸುಕರಾಗಿದ್ದರು. ನಿರ್ದೇಶಕ ಸುಭಾಷ್ ಕಪೂರ್ ಅವರು ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. ಅಕ್ಷಯ್ ಕುಮಾರ್ ಅವರನ್ನು ಗುಲ್ಶನ್ ಕುಮಾರ್ ಪಾತ್ರದಲ್ಲಿ ನಟಿಸಲು ಮೊದಲು ಸಂಪರ್ಕಿಸಲಾಗಿತ್ತು. 2017 ರ ಮಾರ್ಚ್‌ ನಲ್ಲಿ  ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.
ಆದರೆ, ಚಿತ್ರಕಥೆಯಲ್ಲಿನ ವ್ಯತ್ಯಾಸಗಳಿಂದಾಗಿ ಅಕ್ಷಯ್ ಚಿತ್ರದಿಂದ ಹೊರನಡೆದಿದ್ದರು. ಆರಂಭದಲ್ಲಿ ನಿರ್ಮಾಪಕರಾಗಿ ಯೋಜನೆಗೆ ಕೈಜೋಡಿಸಿದ್ದ ಅಮೀರ್ ಖಾನ್, ಆ ಬಳಿಕ ವರುಣ್ ಧವನ್ ಮತ್ತು ಕಪಿಲ್ ಶರ್ಮಾ ಈ ಚಿತ್ರದ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ತಾವೇ ನಟಿಸಲು ಮುಂದಾಗಿದ್ದರು.
‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಕೆಲಸವನ್ನು ಮುಗಿಸಿದ ನಂತರ ಅಮಿರ್ ‘ಮೊಗಲ್’ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಲಿದ್ದಾರೆ ಎಂದು ಅಮೀರ್ ತಂಡ ಹೇಳಿತ್ತು. ಆದಾಗ್ಯೂ, T-ಸೀರೀಸ್ ಹಾಗೂ ಚಲನಚಿತ್ರದ ನಿರ್ಮಾಪಕರು ಯೋಜನೆಯನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಹಿಷ್ಕಾರ ಕರೆಗಳನ್ನು ಎದುರಿಸಿದ ನಂತರ ದೊಡ್ಡ ಸೋಲು ಕಂಡಿದೆ. “ಹೆಚ್ಚುತ್ತಿರುವ ಅಸಹಿಷ್ಣುತೆ” ಯಿಂದ ತಾನು ಮತ್ತು ಅವರ ಪತ್ನಿ ಭಾರತದ ಹೊರಗೆ ವಲಸೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇವೆ ಎಂಬ ಖಾನ್ ಹೇಳಿಕೆಗೆ ಜನರು ಚಿತ್ರಕ್ಕೆ ಬಹಿಷ್ಕರ ಹಾಕುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಚಿತ್ರಮಂದಿರಕ್ಕೆ ಜನರು ಬರದಿದ್ದರಿಂದ ದೇಶಾದ್ಯಂತ ಹಲವಾರು ಚಿತ್ರಮಂದಿರಗಳು ಲಾಲ್ ಸಿಂಗ್ ಚಡ್ಡಾ ಪ್ರದರ್ಶನಗಳನ್ನು ರದ್ದುಗೊಳಿಸಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!