ಹೊಸದಿಗಂತ ವರದಿ,ಮೈಸೂರು:
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ನಗರದ ಲಕ್ಷ್ಮಿಪುರಂ ಠಾಣೆಯ ಪೊಲೀಸರಿಗೆ ದೂರು ನೀಡಿದೆ.
ಆಗಸ್ಟ್ ೧೦ರಂದು ಮೈಸೂರಿನ ಮಹಾರಾಜ ಕಾಲೇಜ್ ಮೈದಾನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದಲ್ಲಿ ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಮುಡಾ ವಿಚಾರಕ್ಕೆ ಸಂಬoಧಿಸಿದoತೆ ಭಾಷಣ ಮಾಡಿದ್ದರು.
ಭಾಷಣದುದ್ದಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಡಿಕೆಶಿವಕುಮಾರ್ ಅವರು ಬೆಂಗಳೂರಿನ ಜೇಡರಹಳ್ಳಿ ರಸ್ತೆಗಳಲ್ಲಿ ಇರುವ ಮ್ಯಾನ್ ಹೋಲ್ ಮುಚ್ಚಳಗಳನ್ನು ಕಳ್ಳತನ ಮಾಡಿ ಗುಜರಿಗೆ ಮಾರಾಟ ಮಾಡುತ್ತಾ ಇದ್ದರು, ಸಿಡಿ ಶಿವು, ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದರು. ಮಾಜಿ ಸಿಎಂ ಎಸ್ .ಎಂ.ಕೃಷ್ಣರ ಅಳಿಯ ಸಿದ್ಧಾರ್ಥ ಸಾವಿಗೆ ಕಾರರ‍್ಯಾರು ಹೇಳಲಿ ಎಂದು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು.ಹಾಗಾಗಿ ಎಚ್‌ಡಿ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಡಿಕೆಶಿ ವರ್ಚಸ್ಸಿಗೆ ಧಕ್ಕೆ ಆಗಿದೆ. ಈ ಹೇಳಿಕೆಗಳನ್ನು ನೀಡಿ ಡಿ.ಕೆ.ಶಿವಕುಮಾರ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು. ಹಾಗೂ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿ ಸಾರ್ವಜನಿಕವಾಗಿ ತೇಜೋವಧೆ ಮಾಡಿರುವ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪಕ್ಷದ ಮಾಧ್ಯಮ ವಕ್ತಾರ ಟಿ.ಶ್ರೀನಿವಾಸ್ ದೂರಿನಲ್ಲಿ ಮನವಿ ಮಾಡಿದ್ದಾರೆ.