Wednesday, July 6, 2022

Latest Posts

ಕೃಷಿ ಅಭಿಯಾನ ಪ್ರಚಾರ ವಾಹನಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಕೃಷಿ ಮತ್ತು ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಕಾರ್ಯಕ್ರಮ, ಯೋಜನೆಗಳ ಮಾಹಿತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕೃಷಿ ಅಭಿಯಾನ ಪ್ರಚಾರ ವಾಹನಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಶೀರ್ಷಿಕೆಯಡಿ ಕೃಷಿ ಅಭಿಯಾನ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ ಅಭಿಯಾನದ ಪ್ರಚಾರ ವಾಹನವು ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಸಹಕಾರ ಮತ್ತು ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಸೌಲಭ್ಯಗಳು ಕುರಿತು ಪ್ರಚಾರ ನಡೆಸಲಿದೆ. ಕೃಷಿ ಅಭಿಯಾನ ವಾಹನವು ಚಿತ್ರದುರ್ಗ ತಾಲ್ಲೂಕಿನಲ್ಲಿ ಎಲ್ಲ ಗ್ರಾಮಗಳಲ್ಲಿ ೧೦ ದಿನಗಳ ಕಾಲ ಸಂಚರಿಸಲಿದೆ ಎಂದು ಹೇಳಿದರು.
ಜಿಲ್ಲೆಯು ಅತ್ಯಂತ ಕಡಿಮೆ ಬೀಳುವ ಪ್ರದೇಶವಾಗಿದ್ದು, ಸೋಯಾಬಿನ್, ಕದಿರಿಲೇಪಾಕ್ಷಿ ಶೇಂಗಾ ಬೆಳೆ ಸೇರಿದಂತೆ ಜಿಲ್ಲೆಗೆ ಸೂಕ್ತವಾದ ಬೆಳೆಗಳ ಕುರಿತು ರೈತರ ಮನೆ ಬಾಗಿಲಿಗೆ ವಾಹನವು ಸಂಚರಿಸಿ ಮಾಹಿತಿ ನೀಡಲಿದೆ ಎಂದರು.
೮೨ ಕೋಟಿ ರೂ. ಬಿಡುಗಡೆ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಜಿಲ್ಲೆಗೆ ೮೨ ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೇ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆಯಾಗಿದೆ. ಹೊಸ ತಳಿಯ ಎಣ್ಣೆಕಾಳುಗಳನ್ನು ಬೆಳೆಯಲು ರೈತರಿಗೆ ಉಚಿತವಾಗಿ ಶೇಂಗಾ ಮತ್ತು ತೊಗರಿ ಕಾಳುಗಳ ಕಿಟ್ ವಿತರಿಸಲಾಗುವುದು ಎಂದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾತನಾಡಿ, ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ರೈತರಿಗೆ ಪರಿಚಯ ಮಾಡಿಕೊಡುವುದು ಕೃಷಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಇಕೆವೈಸಿ, ಮಣ್ಣು ಪರೀಕ್ಷೆ, ತೊಗರಿ, ಸೋಯಾಬಿನ್, ಕದರಿ ಲೇಪಾಕ್ಷಿ ಹೊಸ ತಳಿಯ ಮಾಹಿತಿ ನೀಡುವುದರ ಜೊತೆಗೆ ಹೊಸ ತಾಂತ್ರಿಕತೆ ಹಾಗೂ ಇಲಾಖೆಯ ಕಾರ್ಯಕ್ರಮಗಳ ಉಪಯೋಗವನ್ನು ರೈತರು ಪಡೆಯಲಿ ಎಂಬ ಉದ್ದೇಶದಿಂದ ಈ ವಾಹನವು ಸಂಚರಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸತ್ಯನಾರಾಯಣ, ಕೃಷಿ ಇಲಾಖೆ ಉಪನಿರ್ದೇಶಕರಾದ ಬಿ.ಎನ್.ಪ್ರಭಾಕರ್, ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕ ಎನ್.ಚಂದ್ರಕುಮಾರ್, ಕೃಷಿ ಅಧಿಕಾರಿಗಳಾದ ಆಶಾರಾಣಿ, ಶರಣಪ್ಪ, ತಾಂತ್ರಿಕ ಅಧಿಕಾರಿ ಶ್ವೇತಾ, ತೋಟಗಾರಿಕೆ ಇಲಾಖೆಯ ಶಿವಕುಮಾರ್, ಪಶುಸಂಗೋಪನೆ ಇಲಾಖೆಯ ಡಾ.ಕುಮಾರ್, ರೈತ ಮುಖಂಡ ಬಸ್ತಿಹಳ್ಳಿ ಸುರೇಶ್‌ಬಾಬು ಹಾಗೂ ರೈತರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss