ಅಲೆವೂರು ಸಮೀಪದ ಮರ್ಣೆಯ ಮಹೇಶ್‌ಗೆ ಪತ್ರ ಬರೆದರು ಸಚಿನ್ ತೆಂಡೂಲ್ಕರ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉಡುಪಿಯ ಅಲೆವೂರು ಸಮೀಪದ ಮರ್ಣೆಯ ಯುವ ಕಲಾವಿದ ಮಹೇಶ್ ಎಂಬವರು ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ವಿಷಯವಾಗಿ ಇಟ್ಟುಕೊಂಡು ಒಂದು ಕಲಾಕೃತಿ ರಚಿಸಿದ್ದರು. ಈ ಕಲಾಕೃತಿಗೆ ವ್ಯಾಪಕ ಮನ್ನಣೆ ದೊರಕಿದ ಹಿನ್ನೆಲೆಯಲ್ಲಿ ಖುದ್ದು ಸಚಿನ್ ತೆಂಡೂಲ್ಕರ್ ಅವರೇ ಈ ಕಲಾವಿದನಿಗೆ ಪ್ರಶಂಸಾ ಪತ್ರ ಕಳುಹಿಸಿ ಅಚ್ಚರಿ ಮೂಡಿಸಿದ್ದಾರೆ.

ದಾಖಲೆ ಬರೆದಿದ್ದರು!

ಕಲಾವಿದ ಮಹೇಶ್ ಮರ್ಣೆ ಅವರು ಅಶ್ವತ್ಥದ ಎಲೆಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಕೇವಲ ಏಳೇ ನಿಮಿಷಗಳಲ್ಲಿ ರಚಿಸಿದ್ದರು. ಅವರ ಈ ಕಲಾಕೃತಿ ಎಕ್ಸ್ ಕ್ಲೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿತ್ತು. ಅಶ್ವತ್ಥ ಎಲೆಯ ಮೂಲಕ ರಚಿಸಿದ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರದ ವೀಡಿಯೋವನ್ನು ಉತ್ತರ ಪ್ರದೇಶದ ಬರೇಲಿಯ ಲಾಟ ಪ್ರತಿಷ್ಠಾನಕ್ಕೆ ಕಳುಹಿಸಲಾಗಿತ್ತು. ಈ ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಸ್ಥೆ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್‌ಗೆ ಮರ್ಣೆ ಅವರ ಹೆಸರನ್ನು ಸೇರ್ಪಡೆಗೊಳಿಸಿತ್ತು. ಇದೀಗ ಖುದ್ದು ಸಚಿನ್ ತೆಂಡೂಲ್ಕರ್ ಅವರೇ ಈ ಕಲಾವಿದನಿಗೆ ಪ್ರಶಂಸಾ ಪತ್ರ ಕಳುಹಿಸಿ ಅಚ್ಚರಿ ಮೂಡಿಸಿದ್ದಾರೆ.
ಏನಿದೆ ಸಚಿನ್ ಕಳುಹಿಸಿದ ಪ್ರಶಂಸಾ ಪತ್ರದಲ್ಲಿ?
ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಕೇವಲ ಏಳೇ ನಿಮಿಷಗಳಲ್ಲಿ ರಚಿಸಿದ ಈ ದಾಖಲೆಯ ಬಗ್ಗೆ ಮಾಹಿತಿ ಪಡೆದು ಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು ಮಹೇಶ್ ಮರ್ಣೆ ಅವರಿಗೆ ಪ್ರಶಂಸಾ ಪತ್ರವನ್ನು ಕಳುಹಿಸಿದ್ದಾರೆ.
‘ನನ್ನ ಮೇಲೆ ಪ್ರೀತಿ ಇಟ್ಟು ನೀವು ರಚಿಸಿರುವ ಕಲಾಕೃತಿ ಕಂಡು ನಾನು ಬೆರಗಾಗಿದ್ದೇನೆ.
ನೀವು ನನ್ನ ಮೇಲೆ ತೋರಿಸಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಸಂಗ್ರಹದಲ್ಲಿರುವ ಎರಡು ಅಮೂಲ್ಯ ಫೋಟೋಗಳನ್ನು ನಿಮಗೆ ಕಳುಹಿಸುತ್ತಿದ್ದೇನೆ. ನನ್ನ ಎರಡನೇ ಇನ್ನಿಂಗ್ಸ್‌ಗೂ ಕೂಡಾ ನೀವು ತೋರಿಸುತ್ತಿರುವ ಪ್ರೀತಿ ಮತ್ತು ಬೆಂಬಲ ನನಗೆ ಪ್ರೇರಣೆಯಾಗಿದೆ’ ಹೀಗೆಂದು ಬರೆದು, ಹಸ್ತಾಕ್ಷರ ಮಾಡಿದ ಪತ್ರವನ್ನು ಕಳುಹಿಸಿದ್ದಾರೆ.
ತನ್ನ ವೃತ್ತಿ ಜೀವನದಲ್ಲಿ 100ನೇ ಸೆಂಚುರಿ ಬಾರಿಸಿರುವ ಕ್ಷಣದ ಅಮೂಲ್ಯ ಭಾವಚಿತ್ರದ ಜೊತೆಗೆ ವರ್ಲ್ಡ್ ಕಪ್ ಎತ್ತಿರುವ ಮತ್ತೊಂದು ಚಿತ್ರವನ್ನು ಕೂಡ ಪತ್ರದ ಜೊತೆ ಲಗತ್ತಿಸಿ ಹಸ್ತಾಕ್ಷರ ಹಾಕಿ ಕಳುಹಿಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದರು
2015ರಲ್ಲಿ ಐಸ್ ಕ್ರೀಮ್ ಕಡ್ಡಿಗಳು ಮತ್ತು ಬೆಂಕಿ ಕಡ್ಡಿಗಳಿಂದ ರಚಿಸಿದ ಗಣಪತಿಯ ಕಲಾಕೃತಿಯ ಮೂಲಕ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಕೂಡಾ ಸೇರ್ಪಡೆಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!