ಹೊಸ ದಿಗಂತ ವರದಿ, ಮಡಿಕೇರಿ:
ಸರಕಾರ ಎಲ್ಲಾ ರೀತಿಯ ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ಕೆಲವೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧ ಮಾಡಿದೆ. ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಈ ಬಗ್ಗೆ ಅರಿವು ಮೂಡಿಸಿಕೊಂಡು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹೇಳಿದ್ದಾರೆ.
ನಗರದ ಚೇಂಬರ್ ಆಫ್ ಕಾಮರ್ಸ್ ಸಮಿತಿ ವತಿಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2016ರಲ್ಲೇ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಸರಕಾರ ಆದೇಶ ಹೊರಡಿಸಿದೆ. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಕಾಯ್ದೆ ಕಾನೂನು, ನಿಯಮಗಳನ್ನು ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಅರಿತುಕೊಂಡು ಪರಿಪಾಲನೆ ಮಾಡಬೇಕೆಂದು ಹೇಳಿದರು.
ಪ್ಲಾಸ್ಟಿಕ್ ಬಳಕೆ, ವ್ಯಾಪಾರ ಮಾಡುತ್ತಿರುವ ಅಂಗಡಿ, ಮುಂಗಟ್ಟುಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ದಂಡ ವಿಧಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದು ದಾಳಿಯಲ್ಲ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪರಿಶೀಲನೆ ಮಾಡುವುದಾಗಿದೆ ಎಂದರು.
ವ್ಯಾಪಾರಿಗಳಿಗೆ ವಿಧಿಸುವ ದಂಡದಿಂದ ಸರಕಾರಕ್ಕೆ ಏನೂ ಲಾಭವಿಲ್ಲ. ಬದಲಿಗೆ ಅವರಲ್ಲಿಯೂ ಅರಿವು ಮೂಡಿಸುವ ಸಲುವಾಗಿ ಈ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ಮಾಡುತ್ತಿರುವುದಾಗಿ ಹೇಳಿದರು.
ಸ್ಥಳೀಯ ಸಂಸ್ಥೆಗಳು ಅಂಗಡಿಗಳಿಗೆ ಪರಿಶೀಲನೆಗೆ ತೆರಳುವ ಮುನ್ನ ಮಾಹಿತಿ ನೀಡಬೇಕು ಎಂಬ ಆರೋಪಗಳಿವೆ. ಆದರೆ, ನಿಯಮದಡಿ ಪ್ರತಿವಾರ ಕೆಲವೊಂದು ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಬಹುದಾಗಿದೆ. ಈ ಬಗ್ಗೆ ವ್ಯಾಪಾರಸ್ಥರು ಅರಿತುಕೊಳ್ಳಬೇಕು. ಮುಂದೊಂದು ದಿನ ಎಲ್ಲರ ಅಂಗಡಿಗಳಲ್ಲಿಯೂ ಪರಿಶೀಲನೆ ಆಗಬಹುದೆಂಬ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಮದುವೆ, ಸಮಾರಂಭ ಮುಂತಾದೆಡೆ ಅಧಿಕ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ವ್ಯಾಪಾರಿಗಳು ಗಮನಕ್ಕೆ ತಂದ ಸಂದರ್ಭ ಉತ್ತರಿಸಿದ ಜಿಲ್ಲಾಧಿಕಾರಿಗಳು, ಸಮಾರಂಭ ನಡೆಸಲಾಗುವ ಕಲ್ಯಾಣ ಮಂಟಪಗಳು ಹಾಗೂ ಆಹಾರ ಸರಬರಾಜು ಮಾಡುವ ‘ಕ್ಯಾಟರಿಂಗ್’ ವ್ಯವಸ್ಥೆಯವರನ್ನು ಕರೆಸಿ ಸೂಚನೆ ನೀಡಲಾಗುವುದು. ನಂತರದಲ್ಲಿಯೂ ಬಳಕೆ ಕಂಡು ಬಂದಲ್ಲಿ ಸಮಾರಂಭ ನಡೆಯುವ ಕಲ್ಯಾಣ ಮಂಟಪಗಳು, ಸಭಾಂಗಣದ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಎಲ್ಲೆಂದರಲ್ಲಿ ಕಸವನ್ನು ಎಸೆದು ಹೋಗುತ್ತಾರೆ. ಅಂತಹವರಿಗೆ ಜಿಲ್ಲೆಯ ಸೂಕ್ಷ್ಮತೆ ಬಗ್ಗೆ ತಿಳಿ ಹೇಳಿ ಮಾಹಿತಿ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿಗಾ ವಹಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವ್ಯಾಪಾರಿಗಳಿಗೆ ಸಲಹೆ ನೀಡಿದರು.
ಪ್ಯಾಕಿಂಗ್‌ಗೆ ವಿನಾಯಿತಿ
ಕನಿಷ್ಟ ಅಂಗಡಿಯಲ್ಲಿ ಗ್ರಾಹಕರಿಗೆ ಸಾಮಾಗ್ರಿಗಳನ್ನು ‘ಪ್ಯಾಕ್’ ಮಾಡಿಕೊಡಲಾದರೂ ಅವಕಾಶ ಮಾಡಿಕೊಬೇಕೆಂಬ ವ್ಯಾಪಾರಸ್ಥರ ಕೋರಿಕೆಗೆ ಮನ್ನಣೆ ನೀಡಿದ ಜಿಲ್ಲಾಧಿಕಾರಿಗಳು, ಸ್ಥಳೀಯ ಸಂಸ್ಥೆಯವರಿಗೆ ಸೂಚನೆ ನೀಡಲಾಗುವುದು. ಅಂಗಡಿಯಲ್ಲಿ ಪ್ಯಾಕ್ ಮಾಡಿದ ಸಾಮಾಗ್ರಿಗಳ ಪ್ಲಾಸ್ಟಿಕ್ ಚೀಲವನ್ನು ಜಪ್ತಿ ಮಾಡಬಾರದು. ಆದರೆ, ಪ್ಯಾಕ್ ಮಾಡಿದ ಸಾಮಾಗ್ರಿಗಳನ್ನು ಮತ್ತೊಂದು ಪ್ಯಾಸ್ಟಿಕ್ ಚೀಲದಲ್ಲಿ ಕೊಂಡೊಯ್ಯುವಂತಿಲ್ಲ ಹಾಗೇನಾದರೂ ಕೊಂಡೊಯ್ದರೆ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ.ದೇವಯ್ಯ, ಪ್ರಧಾನ ಕಾರ್ಯದರ್ಶಿ ಅಂಬೇಕಲ್ ನವೀನ್ ಕುಶಾಲಪ್ಪ, ನಗರ ಅಧ್ಯಕ್ಷ ಧನಂಜಯ, ಸಂಘಟನಾ ಕಾರ್ಯದರ್ಶಿ ವಿನಯ್, ನಗರಸಭಾ ಆಯುಕ್ತ ರಾಮದಾಸ್, ಪರಿಸರ ಅಧಿಕಾರಿ ಉಮಾ ಶಂಕರ್, ಅಭಿಯಂತರೆ ಸೌಮ್ಯ ಹಾಜರಿದ್ದರು.