ಸೋಂಕಿತ ಮೂವರಲ್ಲಿ ಒಬ್ಬರು ಸಾಯುವ ‘ನಿಯೊಕೋವ್’ ವೈರಸ್ ಚೀನಾದಿಂದ ವರದಿಯಾಗಿರುವುದು ಹೌದಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಡೆಲ್ಟಾ, ಒಮಿಕ್ರಾನ್ ಎಂಬೆಲ್ಲ ಹೆಸರುಗಳ ಕೊರೋನಾ ಅಲೆಗಳು ಬಂದುಹೋಗುತ್ತಿರುವಾಗ ಕಳೆದೆರಡು ದಿನಗಳಿಂದ ಸುದ್ದಿಯಲ್ಲಿರುವುದು ಚೀನಾದಲ್ಲಿ ತುಂಬ ಮಾರಕವಾದ ಹೊಸ ವೈರಸ್ ಪತ್ತೆಯಾಗಿದೆ ಎಂಬ ಅಂಶ. ಇದಕ್ಕೆ ನಿಯೊಕೋವ್ (NeoCov) ಅಂತಲೇ ಹೆಸರಿಸಲಾಗಿದೆ.

ಯಾವ ವುಹಾನ್ ನಿಂದ ಕೊರೋನಾವೈರಸ್ ಜಗತ್ತಿಗೆ ಪಸರಿಸಿತೋ ಅದೇ ವುಹಾನ್ ಲ್ಯಾಬಿನಲ್ಲಿ ಕೆಲಸ ಮಾಡುತ್ತಿರುವ ಕೆಲವು ಸಂಶೋಧಕರು ಈ ನಿಯೋಕೋವ್ ಬಗ್ಗೆ ತಯಾರಾಗಿರುವ ವರದಿಯಲ್ಲಿ ತಮ್ಮ ಯೋಗದಾನ ನೀಡಿದ್ದಾರೆ ಎಂಬಂಶ ಮತ್ತಷ್ಟು ಹೆದರಿಕೆ ಅಂಟಿಸುವುದಕ್ಕೆ ಕಾರಣವಾಗಿದೆ. ಅಲ್ಲದೇ, ಈ ವೈರಸ್ಸು ಮೂರು ಜನರಿಗೆ ಅಂಟಿದರೆ ಅದರಲ್ಲಿ ಒಬ್ಬರು ಸಾಯುವ ಸಾಧ್ಯತೆ ಎಂಬಂಶ ಇದರ ವಿವರವನ್ನು ಇನ್ನಷ್ಟು ಭಯಾನಕ ಮಾಡಿದೆ.

ರಿಲ್ಯಾಕ್ಸ್…ಈ ಸಂಶೋಧನಾ ವರದಿ ಸಾಧ್ಯತೆಯ ಕುರಿತಷ್ಟೇ ಮಾತಾಡುತ್ತಿದೆ

ವಾಸ್ತವ ಏನೆಂದರೆ, ನಿಯೋಕೋವ್ ಎಂಬುದು ಮನುಷ್ಯರಲ್ಲಿ ಈಗ ಹರಡುತ್ತಿರುವ ಸೋಂಕು ಅಲ್ಲವೇ ಅಲ್ಲ. ನಿಯೊಕೋವ್ ಎಂಬುದು ಬಾವಲಿಗಳಲ್ಲಿ ಪತ್ತೆಯಾಗಿರುವ ವೈರಸ್. ಈಗ ಚರ್ಚೆಯಲ್ಲಿರುವ ಸಂಶೋಧನಾ ವರದಿ ಹೇಳುವುದಿಷ್ಟೇ- “ಇದು ಮನುಷ್ಯರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಹಾಗಾದರೆ ಸೋಂಕಿತರಲ್ಲಿ ಸಾವಿನ ಪ್ರಮಾಣ ಹೆಚ್ಚಬಹುದು.” ಈ ಸಂಶೇಧನಾ ವರದಿಯಿನ್ನೂ ಪಿಯರ್ ರಿವ್ಯೂ ಆಗಬೇಕಿದೆ, ಅರ್ಥಾತ್ ಸಮಕಾಲೀನ ಸಂಶೋಧಕರು ಈ ವರದಿಯನ್ನು ಚರ್ಚಿಸಿ ಇದರ ಸಾಧುತ್ವವನ್ನು ದೃಢಪಡಿಸಬೇಕಿದೆ.

ಹಾಗಾದರೆ ನಿಯೋಕೋವ್ ಅಷ್ಟೊಂದು ಮಾರಕ ಅಂತ ಹೇಗೆ ಅಭಿಪ್ರಾಯಕ್ಕೆ ಬರಲಾಯಿತು? ಏಕೆಂದರೆ ಇದು ‘ಮರ್ಸ್ಕೋವ್’ ಎಂಬ ಕೊರೋನಾ ಕುಟುಂಬದ ವೈರಸ್ ಒಂದಕ್ಕೆ ಹತ್ತಿರದ್ದು. 2010ರಲ್ಲಿ ಈ ಮರ್ಸ್ ಕೋವ್ ಸೌದಿ. ಯುಎಇ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಹಬ್ಬಿತ್ತು. ಈ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿದವರಲ್ಲಿ ಶೇಕಡ 33 ಮಂದಿ ಮರಣಿಸಿದ್ದರು.

ಹೀಗಾಗಿ ನಾವು ತಿಳಿದಿರಬೇಕಾದದ್ದು- ನಿಯೊಕೋವ್ ಎಂಬುದು ಸದ್ಯಕ್ಕಂತೂ ಮನುಷ್ಯರಲ್ಲಿ ಕಂಡುಬಂದಿರುವ ಸೋಂಕಲ್ಲ. ಬಹಳ ಮುಖ್ಯವಾಗಿ ಈಗ ಚಾಲ್ತಿಯಲ್ಲಿರುವ ನೊವೆಲ್ ಕೊರೋನಾವೈರಸ್ ನ ಯಾವುದೇ ರೂಪಾಂತರವಂತೂ ಇದಲ್ಲವೇ ಅಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!