ಸಂಘದ ಬಗ್ಗೆ ಕೇಳಿಬಂದ ಆರೋಪ ಸತ್ಯಕ್ಕೆ ದೂರ: ಭಾಗಮಂಡಲ ಜೇನು ಕೃಷಿಕರ ಸಹಕಾರ ಸಂಘದ ಅಧ್ಯಕ್ಷ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ನಡೆಸುತ್ತಿರುವ ಜೇನು ಖರೀದಿ ಮತ್ತು ಮಾರಾಟ ವ್ಯವಹಾರ ದಾಖಲೆ ಸಹಿತ ಪಾರದರ್ಶಕವಾಗಿದ್ದು, ಯಾವುದೇ ತನಿಖೆ ನಡೆದರೂ ಸಂಪೂರ್ಣ ಸಹಕಾರ ನೀಡಲು ಸಿದ್ಧ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಮಾಡಿರುವ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದೆ. ಸದ್ಯದಲ್ಲೇ ಸಂಘದ ಚುನಾವಣೆ ನಡೆಯಲಿರುವ ಕಾರಣ ಇಲ್ಲಸಲ್ಲದ ಹೇಳಿಕೆ ನೀಡಿ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ದೂರು ನೀಡಿರುವ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಇವರು 1993 ರಿಂದ 2001 ರವರೆಗೆ ಇದೇ ಸಹಕಾರ ಸಂಘದಲ್ಲಿ ಅಧಿಕಾರ ವರ್ಗದ ನಿರ್ದೇಶಕರಾಗಿದ್ದರು. ನಿವೃತ್ತಿಯಾದ ನಂತರ ಭಾಗಮಂಡಲದಲ್ಲಿ ಅಂಗಡಿ ಮಳಿಗೆ ನಡೆಸುತ್ತಿರುವ ಇವರು ಕೊಡಗಿನ ಶುದ್ಧ ಜೇನನ್ನೇ ಮಾರಾಟ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಂಘದ ವಿರುದ್ಧ ದೂರು ನೀಡಿದವರು ಇದೇ ಸಂಘದಿಂದ 2022 ಜನವರಿ 6 ಕ್ಕೆ 10 ಕೆಜಿ ಜೇನು ಖರೀದಿಸಿದ್ದಾರೆ. ಸಂಘದ ವಿರುದ್ಧದ ಆರೋಪ ಪ್ರಕರಣದಲ್ಲಿ ಶಾಸಕರನ್ನು ಎಳೆದು ತಂದಿರುವುದು ಖಂಡನೀಯ. ಶಾಸಕರಿಗೂ, ಸಂಘದ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ವಿನಾಕಾರಣ ಕಾಂಗ್ರೆಸ್ಸಿಗರು ಆರೋಪ ಮಾಡಿರುವುದು ಸರಿಯಾದ ಕ್ರಮವಲ್ಲ. ನಮ್ಮ ಬಳಿ ಎಲ್ಲಾ ದಾಖಲೆಗಳಿವೆ, ಯಾರೇ ತನಿಖೆ ನಡೆಸಿದರೂ ಸಂಪೂರ್ಣ ಸಹಕಾರ ಮತ್ತು ದಾಖಲೆ ಪರಿಶೀಲನೆಗೂ ಅವಕಾಶ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.
ತೀರ್ಥಹಳ್ಳಿಯಿಂದ ವಾರ್ಷಿಕ ಒಂದೂವರೆ ಲಕ್ಷ ಕೆ.ಜಿಯಷ್ಟು ಜೇನು ಖರೀದಿಸಲಾಗುತ್ತದೆ. ಸ್ಥಳೀಯವಾಗಿಯೂ ಜೇನು ಕೃಷಿಕರು ನೀಡುವ ಜೇನನ್ನು ಖರೀದಿಸಿ ಎಲ್ಲಾ ಜೇನನ್ನು ಸಮೀಕರಿಸಿ ಪ್ರಯೋಗಾಲಯದ ಪರೀಕ್ಷೆಯ ನಂತರ ಮಾರಾಟ ಮಾಡಲಾಗುತ್ತದೆ.
ಸಂಘದ ಪ್ರಯೋಗಾಲಯದಲ್ಲೇ ಜೇನಿನ ಪರೀಕ್ಷೆ ನಡೆಯುತ್ತದೆ. ಸಂಬಂಧಿಸಿದ ಇಲಾಖೆಯವರು ಜಿಲ್ಲೆಯ ವಿವಿಧೆಡೆ ಅಂಗಡಿಗಳಿಗೆ ಭೇಟಿ ನೀಡಿ ಜೇನಿನ ಗುಣಮಟ್ಟವನ್ನು ಪ್ರಯೋಗಾಲಯ ಪರೀಕ್ಷೆಯ ಮೂಲಕ ಖಾತ್ರಿ ಪಡಿಸಿಕೊಳ್ಳುತ್ತಾರೆ. ಹೊರ ಜಿಲ್ಲೆ, ಹೊರ ರಾಜ್ಯದ ಜೇನಿಗೆ ಪ್ರಸ್ತುತ ಒಂದು ಕೆ.ಜಿ ಗೆ 135 ರೂ.ಗಳಿಂದ 137 ರೂ. ವರೆಗೆ ನೀಡಿ ಖರೀದಿಸಲಾಗುತ್ತದೆ. ಸ್ಥಳೀಯರ ಜೇನಿಗೆ 250 ರೂ. ಮತ್ತು ಬೋನಸ್ 25 ರೂ. ಸೇರಿ ಒಟ್ಟು 275 ರೂ. ನೀಡಲಾಗುತ್ತದೆ. ನಾವು ಗ್ರಾಹಕರಿಗೆ ಜಿಎಸ್‍ಟಿ ಸೇರಿ ಒಂದು ಕೆ.ಜಿ ಗೆ 315 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ತೀರ್ಥಹಳ್ಳಿ ಸಂಸ್ಥೆಯಿಂದ ಜೇನು ಖರೀದಿಸಿದ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಆ ಸಂಸ್ಥೆಗೆ ಆನ್ ಲೈನ್ ಮೂಲಕ ಹಣ ಪಾವತಿ ಮಾಡಿದ ದಾಖಲೆಯೂ ಇದೆ ಎಂದು ಸತೀಶ್ ಕುಮಾರ್ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ರೋಗಬಾಧೆಯಿಂದ ಜೇನು ಕೃಷಿ ಹಿನ್ನಡೆ ಅನುಭವಿಸಿದಾಗ ಹೊರಗಿನಿಂದ ಜೇನು ಖರೀದಿಸುವ ಕುರಿತು 1992- 93 ರ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಂದಿನಿಂದ ಜೇನು ಖರೀದಿ ವ್ಯವಹಾರ ಇದೇ ರೀತಿಯಾಗಿ ನಡೆದುಕೊಂಡು ಬಂದಿದೆ ಎಂದು ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿಠಲ, ನಿರ್ದೇಶಕರಾದ ಅರಗ ದಿನೇಶ್, ಪಾಣತ್ತಲೆ ಲೋಕನಾಥ್, ಉದಯ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಸುಧಾ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!