ವಿದೇಶದಿಂದ ಮತದಾನ ಮಾಡಲು ಅವಕಾಶ ನೀಡಿ: ಈ ಮನವಿಗೆ ಹೈಕೋರ್ಟ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಚುನಾವಣೆ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಇದರ ನಡುವೆ ಅನಿವಾಸಿ ಭಾರತೀಯರಿಗೆ ಅವರು ಇರುವ ದೇಶದಿಂದಲೇ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಮತದಾನ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಮಂಗಳವಾರ ತಿರಸ್ಕರಿಸಿದೆ.

ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸುವ ಮೂಲಕ ಅಥವಾ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅಲ್ಲಿರುವ ಭಾರತೀಯರ ಪರವಾಗಿ ರವಿ ಎಂ ಎಂಬವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ತಾವು ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವೋಟರ್ ಐಡಿ ಕಾರ್ಡ್ ಹೊಂದಿರುವುದಾಗಿಯೂ ಅರ್ಹ ಮತದಾರನಾಗಿರುವುದಾಗಿಯೂ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಸುಮಾರು 60 ಲಕ್ಷ ಮಂದಿ ಅನಿವಾಸಿ ಭಾರತೀಯರಿದ್ದು, ಈ ಪೈಕಿ 5 ಲಕ್ಷ ಮಂದಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಾಗೂ ವಿಜಯಕುಮಾರ್ ಪಾಟೀಕ್ ಅವರಿದ್ದ ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿತು.

ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿತು. ಇದನ್ನು ಪುರಸ್ಕರಿಸಿದ ಪೀಠ, ಈ ವಿಷಯವು ವಿಚಾರಣೆಗೆ ಅರ್ಹತೆ ಹೊಂದಿಲ್ಲ. ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!