Wednesday, October 5, 2022

Latest Posts

ಆದಿವಾಸಿ ಜನರ ಅಪ್ರತಿಮ ನಾಯಕ, ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಮಹಾನ್ ಕ್ರಾಂತಿಕಾರಿ ಅಲ್ಲೂರಿ ಸೀತಾರಾಮ ರಾಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯ ಅಮೃತ ಮಹೋತ್ಸವದ ವಿಶೇಷ)

ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿ ಆಗಸ್ಟ್ 15, 2022ಕ್ಕೆ 75 ವರ್ಷಗಳಾಗುತ್ತದೆ. ನಾವೆಲ್ಲಾ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಅನೇಕ ಮಹಾನ್‌ರ ತ್ಯಾಗದ ಫಲ. ಈ ದಿನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ಸ್ಮರಿಸಿಕೊಳ್ಳಲೆಂದೇ ಮೀಸಲಾದ ದಿನ. ಅಂತಹ ಸ್ಮರಿಸಲೇ ಬೇಕಾದ ಅಗ್ರಮಾನ್ಯ ಹೋರಾಟಗಾರರಲ್ಲಿ ಅಲ್ಲೂರಿ ಸೀತಾರಾಮ ರಾಜು ಒಬ್ಬರು. ಭಾರತದ ಸ್ವಾತಂತ್ರ್ಯ ಹೋರಾಟದ ಹೊತ್ತಿಗೆಯಲ್ಲಿ ಸೀತಾರಾಮ ರಾಜುರದ್ದೇ ಒಂದು ಪ್ರತ್ಯೇಕ ಅಧ್ಯಾಯ.
1897ರಲ್ಲಿ ಜನಿಸಿದ ಅಲ್ಲೂರಿ ಸೀತಾರಾಮ ರಾಜು ತನ್ನ 18 ನೇ ವಯಸ್ಸಿನಲ್ಲಿ ಸನ್ಯಾಸಿಯಾಗಿ ಮನೆ ತ್ಯಜಿಸಿ, ಮುಂದೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಬ್ರಿಟೀಷರಿಗೆ ಸಿಂಹಸ್ವಪ್ನರಾದರು.
1920 ರ ದಶಕದಲ್ಲಿ ಅವರು ಹೈದರಾಬಾದ್‌ನ ಕೊನೆಯ ನಿಜಾಮ್ ಮತ್ತು ಸ್ಥಳೀಯ ಭೂಮಾಲೀಕರ ದಬ್ಬಾಳಿಕೆ ವಿರುದ್ಧ ದಂಗೆಯನ್ನು ಮುನ್ನಡೆಸಿದರು. ನಿರಾಯುಧ ಆದಿವಾಸಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದ ಹೈದರಾಬಾದ್‌ ನ ನಿಜಾಮ ಬೆಳೆ ಆದಾಯದ ಮೇಲೆ ಗಣನೀಯ ತೆರಿಗೆಗಳನ್ನು ವಿಧಿದ್ದರಿಂದ ಬಡವರು ಬದುಕುವುದೇ ಕಷ್ಟವಾಗಿತ್ತು. ಈ ವೇಳೆ ಹೋರಾಟದಲ್ಲಿ ತೊಡಗಿದ ಸೀತಾರಾಮರಾಜು ನಿಜಾಮ ಕಂಗಾಲಾಗುವಂತೆ ಉತ್ತರ ನೀಡುವಂತೆ ಜನರನ್ನು ಸಿದ್ಧಗೊಳಿಸಿದರು. ‘ಜಲ್ ಜಂಗಲ್ ಜಮೀನ್’ ಎಂಬ ಐತಿಹಾಸಿಕ ಘೋಷಣೆಯನ್ನು ಹುಟ್ಟುಹಾಕಿದರು.
ಇದೇ ಸಂದರ್ಭದಲ್ಲಿ ಬ್ರಿಟೀಷ್‌ ಸರ್ಕಾರ ಮದ್ರಾಸ್ ಅರಣ್ಯ ಕಾಯಿದೆಯನ್ನು ಜಾರಿಗೆ ತಂದು ಗ್ರಾಮೀಣ ಭಾಗದ ರೈತರ ಸುಲಿಗೆಗೆ ನಿಂತಿತು. ಹಳ್ಳಿಗರ ಸಾಂಪ್ರದಾಯಿಕ ಕೃಷಿ ಪದ್ಧತಿಯ ಮೇಲೆ ನಿಷೇಧ ಹೇರಿ ರೈತರು ನಿರ್ದಿಷ್ಟ ಲಾಭದಾಯಕ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಈ ಕಾಯ್ದೆಯ ಮೂಲಕ ಹುಕುಂ ಹೊರಡಿಸಿತು. ಅಲ್ಲದೆ ಗೊಂಡ ಬುಡಕಟ್ಟು ಜನರು ಕಾಡಿನೊಳಗೆ ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತು.
ಈ ಕಾಯ್ದೆಯು ಹಳ್ಳಿಗರ ಚೈತನ್ಯವನ್ನೇ ಬತ್ತಿಸಿತು. ಬ್ರಟೀಷರು ಹಳ್ಳಿಗರ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಲ್ಲದೇ ಅವರ ಕೃಷಿಭೂಮಿ, ಬೆಳೆದ ಬೆಳೆಯನ್ನು ದೋಚುತ್ತಿದ್ದರು. ಬಡ ರೈತರು ವರ್ಷವಿಡೀ ಶ್ರಮವಹಿಸಿ ದುಡಿದು ಬಳೆದ ಬೆಳೆ ಬ್ರೀಟೀಷರ ಪಾಲಾಗುತ್ತಿತ್ತು. ಹೊಟ್ಟೆಬಟ್ಟೆಗಿಲ್ಲದೆ ಜನರು ಅಸಹಾಯಕರಾಗಿ ಕಣ್ಣೀರಿಡುತ್ತಿದ್ದರು. ಈ ಸಂದರ್ಭದಲ್ಲಿ 1922-1924ರ ಸುಮಾರಿಗೆ ಅಲ್ಲೂರಿನ ಗ್ರಾಮೀಣ ಭಾಗಕ್ಕೆ ಬಂದ ಅಲ್ಲೂರಿ ಸೀತಾರಾಮ ರಾಜು ಬಡಜನರ ಧ್ವನಿ ಮತ್ತು ಶಕ್ತಿಯಾದರು. ವಿವಿಧ ಬುಡಕಟ್ಟುಗಳನ್ನು ಒಂದುಗೂಡಿಸಿ ಗೆರಿಲ್ಲಾ ಯುದ್ಧ ತಂತ್ರವನ್ನು ಕಲಿಸಿದರು. ವಸಾಹತುಶಾಹಿ ಶಕ್ತಿಯೊಂದಿಗೆ ಹೋರಾಡಲು ಅವರಿಗೆ ತರಬೇತಿ ನೀಡಿದರು. ಸೀತಾರಾಮರ ಪ್ರೇರಣೆಯಿಂದ ರೈತರು ಬ್ರಿಟೀಷರ ದೌರ್ಜನ್ಯಗಳಿಗೆ ಅವರದ್ದೇ ಶೈಲಿಯಲ್ಲಿ ಉತ್ತರ ಕೊಟ್ಟರು. ಆಗ ಆರಂಭಗೊಂಡಿದ್ದೇ ಪ್ರಸಿದ್ಧವಾದ “ರಾಂಪ ಬಂಡಾಯ” ಅಥವಾ ಮಾನ್ಯಂ ದಂಗೆ. ರೈತರ ಪ್ರತಿರೋಧಕ್ಕೆ ಬ್ರಿಟೀಷರು ಬೆಚ್ಚಿದರು.
ಸೀತಾರಾಮ ರಾಜು ಹಳ್ಳಿಗರಲ್ಲಿ ತುಂಬಿದ್ದ ಧೈರ್ಯ, ಆತ್ಮವಿಶ್ವಾಸ ಹಾಗೂ ತರಬೇತಿ ಪ್ರೇರಣೆಯ ಬಲ ಎಷ್ಟಿತ್ತೆಂದರೆ ಈ ಪಡೆಯನ್ನು ಮಟ್ಟಹಾಕಲು ಎರಡು ವರ್ಷಗಳ ಕಾಲ ಬ್ರಿಟೀಷರು ಕಳುಹಿಸುತ್ತಿದ್ದ ಶಸ್ತ್ರಸಜ್ಜಿತ ಪಡೆಗಳು ಹಳ್ಳಿಗರನ್ನು ಎದುರುಸಲಾಗದೆ ಪ್ರತಿಬಾರಿ ಸೋತು ಓಡಿಹೋಗುತ್ತಿದ್ದವು. ಜೈಲಿನಿಂದ ಓಡಿಹೋಗಿ ಅಸ್ಸಾಂನ ಚಹಾ ತೋಟವೊಂದರಲ್ಲಿ ಅಡಗಿಕೊಂಡಿದ್ದ ಮತ್ತೊಬ್ಬ ಹೋರಾಟಗಾರ ಕೊಮರಂ ಭೀಮ್ ಅಲ್ಲೂರಿನ ದಂಗೆಯ ಬಗ್ಗೆ ತಿಳಿದುಕೊಂಡು ಅಲ್ಲಿಗೆ ಆಗಮಿಸಿ ಗೊಂಡ ಬುಡಕಟ್ಟು ಜನಾಂಗವನ್ನು ರಕ್ಷಿಸಲು ಜೊತೆಯಾದರು. ಸೀತಾರಾಮ ರಾಜು ಬುಡಕಟ್ಟು ಜನರ ಪಾಲಿಗೆ ಆರಾಧ್ಯದೈವವಾದರು. ಅವರ ಧೈರ್ಯಕ್ಕಾಗಿ ಅವರಿಗೆ ಜನರು ಮಾನ್ಯಂ ವೀರುಡು ಅಥವಾ “ಅರಣ್ಯ ವೀರ” ಎಂಬ ಬಿರುದು ನೀಡಿದ್ದರು. ಆದರೆ ದುರಾದೃಷ್ಟವಶಾತ್‌ ಬ್ರಿಟೀಷರ ಅಸ್ಸಾಂ ರೈಫಲ್ ಬೆಟಾಲಿಯನ್ ರೈತರ ಈ ಶಸ್ತ್ರಸ್ತ್ರ ದಂಗೆಯನ್ನು ಹತ್ತಿಕ್ಕಿತು. ಸೀತಾರಾಮ ರಾಜು ಭಾತದ ಸ್ವಾತಂತ್ರ್ಯಕ್ಕೆ ನೀಡಿದ ಕೊಡುಗೆಗಳು, ಬಡಜನರ ಸ್ವಾಭಿಮಾನ ಎತ್ತಿಹಿಡಿಯಲು ನಡೆಸಿದ ಹೋರಾಟಗಳಿಂದ ಭಾರತರ ಚರಿತ್ರೆಯಲ್ಲಿ ಅಜರಾಮರರಾಗಿದ್ದಾರೆ. 1986 ರಲ್ಲಿ, ಭಾರತೀಯ ಅಂಚೆ ಇಲಾಖೆಯು ಅವರ ಸವಿನೆನಪಿಗೆ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದು, ಇದು ಅವರ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಒಳಗೊಂಡಿದೆ.
ನಾಡಿನ ಸಮಸ್ತ ಜನರಿಗೆ ಹೊಸದಿಗಂತ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಶುಭಾಶಯಗಳು..

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!