Thursday, February 2, 2023

Latest Posts

ಕೊಡಗಿನ ಅಭಿವೃದ್ಧಿಯ ಸಾಧನೆಯ ಜೊತೆಗೆ ಕನಸುಗಳೂ ಇವೆ: ಕೆ.ಜಿ.ಬೋಪಯ್ಯ

ಹೊಸದಿಗಂತ ವರದಿ ಮಡಿಕೇರಿ:

ಕೊಡಗಿನ ಅಭಿವೃದ್ಧಿ ಸಂಬಂಧ ಮಾಡಿರುವ ಅಗಾಧವಾದ ಸಾಧನೆಗಳ ಮಧ್ಯೆ ಕನಸಗಳು ಇನ್ನೂ ಜೀವಂತವಾಗಿವೆ. ಅತಿ ಶೀಘ್ರದಲ್ಲೇ ಆ ಕನಸುಗಳನ್ನು ಈಡೇರಿಸುವ ವಿಶ್ವಾಸವಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಡಗಿನ ಬಾಣೆ ಜಾಗಗಳಲ್ಲಿ ಕೃಷಿ ಮಾಡುವ ಹಕ್ಕಿಲ್ಲ ಎಂಬ ಸುತ್ತೋಲೆ ಹೊರಡಿಸಿದಾಗ ವಿಧಾನಸಭೆಯಲ್ಲಿ ಹೋರಾಟ ನಡೆಸಿ, ಆ ಸುತ್ತೋಲೆ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಅದಕ್ಕೆ ಕಾನೂನಿನ ಬಲವನ್ನೂ ತುಂಬಲಾಗಿದೆ. ಇದೀಗ ಕೊಡಗಿನಲ್ಲಿ ಕೃಷಿ ಮಾಡದ ಬಾಣೆ ಜಮೀನನ್ನೂ ಕಂದಾಯ ವ್ಯಾಪ್ತಿಗೆ ತರಲಾಗುತ್ತಿದ್ದು, ಇದರಿಂದ ಜಿಲ್ಲೆಯ ರೈತರ ಬಹು ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಕಲ್ಪಿಸಿದ‌ ತೃಪ್ತಿಯಿದೆ ಎಂದು ನುಡಿದರು.

ಕೊಡಗಿನ ರಸ್ತೆಗಳ ಅಭಿವೃದ್ಧಿಗಾಗಿಯೇ ಮೊದಲ ಬಾರಿಗೆ ವಿಶೇಷ ಪ್ಯಾಕೇಜ್‌ನ್ನು ತಂದ ಸಮಾಧಾನ ಇದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ ಎಂಬ ಕೊರಗೂ ಇದೆ ಎಂದ ಅವರು, 2018ರ ನಂತರ ಸುರಿಯುತ್ತಿರುವ ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದಾಗಿ ರಸ್ತೆ ಕಾಮಗಾರಿಗಳನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಈಗ ಮಳೆ ನಿಂತಿದ್ದರೂ ಕ್ರಷರ್‌ ಮಾಲಕರ ಮುಷ್ಕರದಿಂದ ಅಭಿವೃದ್ಧಿ ಕಾರ್ಯಕ್ಕೆ‌ ಅಡ್ಡಿಯಾಗಿದೆ. ಭರಪೂರ ಅನುದಾನ ತಂದಿದ್ದರೂ ಪ್ರಕೃತಿ ಮತ್ತು ಪ್ರತಿಕೂಲ ಸನ್ನಿವೇಶಗಳಿಂದ ಈ ಕಾರ್ಯಗಳಿಗೆ ಕೊಂಚ ಹಿನ್ನಡೆಯಾಗಿದೆ. ಆದರೆ, ಶೀಘ್ರದಲ್ಲೇ ಈ ಎಲ್ಲಾ ಕಾಮಗಾರಿಗಳು ಆರಂಭವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ಕೋಟಿ‌ ರೂ.ಅನುದಾನ: ಕೊಡಗಿನ ಕೌಟುಂಬಿಕ ಹಾಕಿ ಉತ್ಸವಕ್ಕೆ ಮೊದಲ ಬಾರಿಗೆ 5 ಲಕ್ಷ ರೂ.ಅನುದಾನವನ್ನು ಸರ್ಕಾರದಿಂದ ದೊರಕಿಸಿಕೊಡಲಾಗಿತ್ತು. ಆದರೆ ಈ ಬಾರಿ ಒಂದು ಕೋಟಿ ರೂ.ಅನುದಾನ ಒದಗಿಸಲಾಗಿದೆ. ಕೇಂದ್ರ ಸರ್ಕಾರದ ಮನವೊಲಿಸಿ ಮಡಿಕೇರಿಯಲ್ಲಿ ಸುಸಜ್ಜಿತವಾದ ಹಾಕಿ ಮೈದಾನ ಹಾಗೂ ರಾಜ್ಯ ಸರ್ಕಾರದಿಂದ ಪೊನ್ನಂಪೇಟೆ ಹಾಗೂ ಕೂಡಿಗೆಯಲ್ಲೂ ಕೃತಕ ಹುಲ್ಲುಹಾಸಿನ ಹಾಕಿ ಮೈದಾನ ನಿರ್ಮಿಸಲಾಗಿದೆ ಎಂದು ಬೋಪಯ್ಯ ತಿಳಿಸಿದರು.

ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಪ್ರೌಢಶಾಲೆ ಎರಡು ಪಿಯು ಕಾಲೇಜು, ನಾಪೋಕ್ಲು, ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜುಗಳಿಗೆ ಹೊಸ ಕಟ್ಟಡ ನಿರ್ಮಾಣ‌ ಸೇರಿದಂತೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೂ ಗಮನಹರಿಸಲಾಗಿದೆ ಎಂದು ಅವರು ನುಡಿದರು.
ಮಳೆಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಕಳೆದ ವರ್ಷ 72 ಕೋಟಿ ರೂ.ಗಳನ್ನು 42ಸಾವಿರ ಮಂದಿಗೆ ನೀಡಲಾಗಿದ್ದರೆ, ಈ ಬಾರಿ 52 ಸಾವಿರ ಜನರಿಗೆ 129 ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರಿಗೆ ನೇರವಾಗಿ ಹಣ ಸಂದಾಯ ಮಾಡಿಸಿದ ತೃಪ್ತಿಯೂ ಇದೆ ಎಂದು ಅವರು ಹೇಳಿದರು.

ಕೊಡಗಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ಕೇಳಲಾದ‌ ಪ್ರಶ್ನೆಗೆ ಉತ್ತರಿಸಿದ ಬೋಪಯ್ಯ, ಇದು ಕೊಡಗಿನಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲೇ ವೈದ್ಯರು ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವುದರಿಂದ ಎಲ್ಲೆಡೆ ಸಮಸ್ಯೆ ತಲೆದೋರಿದೆ. ಇದನ್ನು ನಿವಾರಿಸಲು ಹಾಗೂ ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಪ್ರಯತ್ನ ಮುಂದುವರಿಸಲಾಗುತ್ತದೆ ಎಂದು ನುಡಿದರು.

ನಿವೇಶನ ರಹಿತರಿಗೆ ನಿವೇಶನ: ನಿವೇಶನ ರಹಿತರ ಸಮಸ್ಯೆ ಕುರಿತು ಗಮನಸೆಳೆದಾಗ ಪ್ರತಿಕ್ರಿಯಿಸಿದ ಬೋಪಯ್ಯ ಅವರು ನಿವೇಶನ ರಹಿತರಿಗೆ ಭೂಮಿಯನ್ನು ಗುರುತಿಸುವ ಕೆಲಸ ಸಾಗಿದೆ. ಆದರೆ, ತಮಗೆ ಇಂತಹ ಕಡೆಯೇ ನಿವೇಶನ ಬೇಕು ಎಂದು ನಿವೇಶನ ರಹಿತರು ಹಟ ಹಿಡಿದರೆ ಕೊಡುವುದು ಕಷ್ಟ. ಜಾಗ ಸಿಕ್ಕ ಕಡೆ ನಿವೇಶನ ಪಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು
ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಸೌಲಭ್ಯ ಒದಗಿಸಿರುವ ಬಿಜೆಪಿ ಮೇಲೆ ಜನರಿಗೆ ವಿಶ್ವಾಸವಿದೆ. ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಗೆಲ್ಲುತ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ತಾನೂ ಬದ್ಧವಾಗಿರುವೆ ಎಂದು ಚುನಾವಣೆ ಕುರಿತ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!