ದೇಶಪ್ರೇಮ, ಕರ್ತವ್ಯ ನಿಷ್ಠೆಗೆ ಮತ್ತೊಂದು ಹೆಸರು ಅಮರಚಂದ್ ಬಂಥಿಯಾ 

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಅಮರಚಂದ್ ಬಂಥಿಯಾ ಅವರು ಗ್ವಾಲಿಯರ್‌ನ ರಾಜಾ ಜಯಜಿರಾವ್ ಸಿಂಧಿಯಾ ಅವರ ಖಜಾಂಚಿಯಾಗಿದ್ದರು. ಅವರು ಸತ್ಯವಂತರು ಮತ್ತು ಉದಾತ್ತ ಕುಟುಂಬಕ್ಕೆ ಸೇರಿದವರು. ಅವರ ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ಗೂಣಗಳನ್ನು ಮೆಚ್ಚಿ ಅವರನ್ನು ರಾಜ್ಯದ ಗಂಗಾಜಲಿ ಕೋಶ್‌ನ ಖಜಾನೆಯ ಪ್ರಧಾನ ಖಜಾಂಚಿಯಾಗಿ ನೇಮಿಸಲಾಗಿತ್ತು.
1857 ರಲ್ಲಿ  ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ ಗ್ವಾಲಿಯರ್‌ನ ರಾಜಾ ಜಯಜಿರಾವ್ ಸಿಂಧಿಯಾ ಬ್ರಿಟೀಷರಿಗೆ ನಿಷ್ಠೆ ಪ್ರದರ್ಶಿಸಿದ್ದ.
ಇದರಿಂದ ಆಕ್ರೋಶಗೊಂಡ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಗ್ವಾಲಿಯರ್ ಮೇಲೆ ದಾಳಿ ನಡೆಸಿದರು. ಗ್ವಾಲಿಯರ್ ಸೈನಿಕರು ಈ ಯುದ್ಧಕ್ಕೆ ಸಿದ್ಧವಾಗಿರದಿದ್ದರಿಂದ ಸಿಂಧಿಯಾ ರಾಜನು ಯುದ್ಧದಲ್ಲಿ ಸೋತು ಹಿಮ್ಮೆಟ್ಟಿದ. ಮಹಾರಾಜ ಮತ್ತು ದಿವಾನ್ ದಿನಕರ ರಾವ್ ಅವರು ತಮ್ಮ ರಕ್ಷಣೆಗಾಗಿ ಆಗ್ರಾಕ್ಕೆ ಓಡಿಹೋದರು. ಮಹಾರಾಣಿ ಲಕ್ಷ್ಮೀಬಾಯಿ ಮತ್ತು ತಾಂತ್ಯಾ ಟೋಪೆ ಅವರ ಸಂಯೋಜಿತ ಸೈನ್ಯವು ಗ್ವಾಲಿಯರ್ ಅನ್ನು ವಶಪಡಿಸಿಕೊಂಡ ಬಳಿಕ ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಅಗತ್ಯವಾಗಿದ್ದ ನಿಧಿ ಸಂಗ್ರಹಕ್ಕೆ ಮುಂದಾಯಿತು. ಈ ವೇಳೆ ಜಯಜಿರಾವ್ ಸಿಂಧಿಯ ಖಜಾಂಚಿ ಅಮರಚಂದ್ ಬಂಥಿಯಾ ಅವರನ್ನು ಕರೆದು ಗಂಗಾಜಲಿಯ ಖಜಾನೆಯಿಂದ ಸ್ವಲ್ಪ ಹಣವನ್ನು  ಹೋರಾಟದ ಉದ್ದೇಶಕ್ಕೆ ನೀಡುವಂತೆ ಕೇಳಿಕೊಳ್ಳಲಾಯಿತು. ದೇಶದ ರಕ್ಷಣೆಯ ಪ್ರಾಮುಖ್ಯತೆ ಅರಿತ ಅಮರಚಂದ್ ಬಂಥಿಯಾ ಅವರು ಖಜಾನೆಯ ಕೀಲಿಗಳನ್ನು ಹೋರಾಟಗಾರರಿಗೆ ಹಸ್ತಾಂತರಿಸಿದರು.
ಸಂಗ್ರಾಮ ಮುಂದುವರೆದು ಜೂನ್ 16 ರಂದು ಹ್ಯೂಸ್ ಮತ್ತು ಬ್ರಿಗೇಡಿಯರ್ ಸ್ಮಿತ್ ನೇತೃತ್ವದ ಇಂಗ್ಲಿಷ್ ಸೈನ್ಯವು ರಾಣಿ ಲಕ್ಷ್ಮೀಬಾಯಿವರ ಮೇಲೆ ದಾಳಿ ಮಾಡಿತು ಮತ್ತು ಅವರು ಯುದ್ಧದಲ್ಲಿ ಕೊಲ್ಲಲ್ಪಟ್ಟರು. ಆ ವರೆಗೆ ಆಗ್ರಾದಲ್ಲಿ ಅವಿತಿದ್ದ ಮಹಾರಾಜ ಸಿಂಧಿಯಾ 1858 ರಲ್ಲಿ ಬ್ರಿಟಿಷರ ಸಹಾಯದಿಂದ ಗ್ವಾಲಿಯರ್‌ಗೆ ಹಿಂದಿರುಗಿದ. ಬಂದವನೇ ತನ್ನ ಖಜಾನೆ ಬರಿದಾಗಿದ್ದರಿಂದ ಸಿಟ್ಟಿಗೆದ್ದು 1858 ರ ಜೂನ್ 22 ರಂದು ಅಮರಚಂದ್ ಬಂಥಿಯಾಗೆ ಮರಣದಂಡನೆ ವಿಧಿಸಿದ. ಮರವೊಂದಕ್ಕೆ ನೇಣು ಬಿಗಿದು 3 ದಿನಗಳ ಕಾಲ ಆತನ ಮೃತ ದೇಹವನ್ನು ನೇಣು ಹಾಕಲಾಗಿತ್ತು. ಇಂದಿಗೂ ಬಂಥಿಯಾ ಬಳಸುತ್ತಿದ್ದ ಛತ್ರಿ ಗ್ವಾಲಿಯರ್‌ನಲ್ಲಿ ಅದೇ ಸ್ಥಳದಲ್ಲಿ ಉಳಿದಿದೆ. ಮಹಾನ್ ದೇಶಭಕ್ತ ಅಮರಚಂದ್ ಬಂಥಿಯಾ ಅವರು ತಮ್ಮ ಜೀವ ಹೋಗುವುದು ಖಚಿತವಾಗಿದ್ದರೂ ಅದರ ಬಗ್ಗೆ ಕಾಳಜಿ ವಹಿಸದೆ ದೇಶ ಸೇವೆ ಮಾಡುವ ಮೂಲಕ ಅಮರರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!