ನಾಡಿನ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಕೊಡುಗೆ ಅಪಾರ: ಡಾ.ನಂಜುಂಡೇಗೌಡ

ಹೊಸದಿಗಂತ ವರದಿ,ಮಡಿಕೇರಿ:

ಕರ್ನಾಟಕ ಶಿಲ್ಪಕಲೆಯ ತವರೂರು ಆಗಿದ್ದು, ನಾಡಿನ ಶಿಲ್ಪಕಲೆಗೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರ ಎಂದು ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ, ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಸಹಕಾರದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ನಡೆದ ‘ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತೀಯ ಇತಿಹಾಸದಲ್ಲಿ ಕಲೆಗೆ ತನ್ನದೇ ಆದ ಇತಿಹಾಸ ಇದೆ. ಆ ದಿಸೆಯಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ಬೇಲೂರು, ಹಳೆಬೀಡು, ಸೋಮನಾಥಪುರ ಮತ್ತಿತರ ಕಡೆಗಳಲ್ಲಿ ಕೆತ್ತಿರುವ ಕೆತ್ತನೆಗಳೇ ಸಾಕ್ಷಿ ಎಂದು ನುಡಿದರು.
ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಶಿಲ್ಪಕಲಾ ಕ್ಷೇತ್ರದಲ್ಲಿಯೂ ಸಾಕಷ್ಟು ಬದಲಾವಣೆ ಕಾಣಬಹುದು, ಆ ನಿಟ್ಟಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರು ನಾಡಿಗೆ ನೀಡಿರುವ ಅಮರಶಿಲ್ಪದ ಕೊಡುಗೆಯನ್ನು ಉಳಿಸಿಕೊಂಡು ಹೋಗುವಂತಾಗಬೇಕು ಎಂದು ಡಾ.ನಂಜುಂಡೇಗೌಡ ಕರೆ ನೀಡಿದರು.
ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜು ಅವರು ಮಾತನಾಡಿ, ವಿಶ್ವಕರ್ಮ ಸಮಾಜದಲ್ಲಿ ಕಬ್ಬಿಣ, ಮರಗೆಲಸ, ಶಿಲ್ಪಕಲೆ, ಚಿನ್ನಬೆಳ್ಳಿ ಹೀಗೆ ಐದು ರೀತಿಯ ಕುಲಕಸುಬುಗಳನ್ನು ನಿರ್ವಹಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ವೃತ್ತಿ ಕೌಶಲವೂ ಬದಲಾಗುತ್ತಿದೆ. ‘ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಶಿಲ್ಪಕಲೆಗೆ ಹೆಚ್ಚಿನ ಮಹತ್ವವಿದೆ. ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ಬೇಲೂರು ಹಳೆಬೀಡಿನಲ್ಲಿ ಕಲ್ಲಿನಿಂದ ಶಿಲ್ಪಕಲೆಯನ್ನು ಕೆತ್ತಿ ಇಡೀ ವಿಶ್ವವೇ ವೀಕ್ಷಿಸುವಂತೆ ಮಾಡಿದ್ದಾರೆ ಎಂದು ವಿವರಿಸಿದರು.
ಕಲೆಯ ಪ್ರದರ್ಶನಕ್ಕೆ ಜಾಗ ನೀಡಿ: ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ದೇವದಾಸ್ ಅವರು ಮಾತನಾಡಿ, ವಿಶ್ವಕರ್ಮ ಸಮಾಜದವರು ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಲೆಗಳ ಪ್ರದರ್ಶನಕ್ಕೆ ಅವಕಾಶ ಮಾಡಬೇಕು. ಆ ನಿಟ್ಟಿನಲ್ಲಿ ಮಡಿಕೇರಿ ನಗರದಲ್ಲಿ ಕನಿಷ್ಟ 10 ಸೆಂಟು ಜಾಗವನ್ನಾದರೂ ನೀಡಬೇಕು ಎಂದು ಕೋರಿದರು.
ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕರಾದ ಎಚ್.ಎನ್.ಸುಬ್ರಮಣ್ಯ ಅವರು ಮಾತನಾಡಿ ವಿಶ್ವಕರ್ಮ ಸಮಾಜದ ಜನರು ಆರ್ಥಿಕವಾಗಿ ಸಬಲರಾಗಲು ಇನ್ನೂ ಹೆಚ್ಚಿನ ನೆರವು ಒದಗಿಸುವಂತಾಗಬೇಕು ಎಂದು ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಅವರು, ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ತಮ್ಮ ಶಿಲ್ಪ ಕಲೆಯ ಕಾಯಕದ ಮೂಲಕ ಇಡೀ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಸಂಪಾಜೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕುಮಾರ ಅವರು, ಅಮರಶಿಲ್ಪಿ ಜಕಣಾಚಾರಿ ಅವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ, ಜಕಣಾಚಾರಿ ಅವರು ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ ಎಂದು ಹೇಳಿದರು.
ಸನ್ಮಾನ: ವಿವಿಧ ವೃತ್ತಿ ಕೌಶಲ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಶ್ವಕರ್ಮ ಸಮಾಜದ ಮಂಜುನಾಥ್, ಅನಿಲ್ ಬಡಿಗೇರ್, ಸುನಿಲ್, ಪುಟ್ಟಣ್ಣ ಆಚಾರ್ಯ, ಮೋಹನ್ ಅವರನ್ನು ಇದೇ ಸಂದರ್ಭದಲ್ಲಿ ಶಾಲು, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
ತಹಶೀಲ್ದಾರ್ ಪಿ.ಎಸ್., ತಾಲೂಕು ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಜಗದೀಶ್ ಆಚಾರ್ಯ, ಬಿ.ಸಿ.ಶಂಕರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಮಣಜೂರು ಮಂಜುನಾಥ್ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!