ಅಂಬೇಡ್ಕರ್ ದೃಷ್ಟಿಕೋನದಲ್ಲಿವೆ ಪ್ರಧಾನಿ ಮೋದಿಯವರ ಯೋಜನೆಗಳು: ಕರಿಕೆರೆ ತಿಪ್ಪೇಸ್ವಾಮಿ

ಹೊಸ ದಿಗಂತ ವರದಿ, ಚಿತ್ರದುರ್ಗ: 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎಲ್ಲಾ ಯೋಜನೆಗಳು ಅಂಬೇಡ್ಕರ್ ಅವರ ದೃಷ್ಟಿಕೋನದ ಮಾರ್ಗದಲ್ಲಿವೆ ಎಂದು ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾದ ಅಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರವರು ಭಾರತ ಸ್ವಾತಂತ್ರ್ಯದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿದ್ದಾರೆ. ಹಲವಾರು ತಾರತಮ್ಯದ ವಿರುದ್ದ ಹೋರಾಟ ನಡೆಸುವ ಮೂಲಕ ಅವಕಾಶ ವಂಚಿತರಿಗೆ ನ್ಯಾಯ ದೂರಕಿಸಿದ್ದಾರೆ. ಮಹಿಳೆಯರು, ದಲಿತರು, ಬಡ ಜನತೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟ್ಟಿದ್ದರು. ಸಮಾಜವನ್ನು ಬದಲಾಯಿಸಲು ಕಾನೂನು ಮತ್ತು ರಾಜಕೀಯ ಹಾದಿ ಹಿಡಿದರು. ಅವರ ಹೋರಾಟ ಕೇವಲ ಜಾತಿ ವ್ಯವಸ್ಥೆಯ ವಿರುದ್ದ ಅಲ್ಲ. ಆ ವರ್ಗಗಳ ಉನ್ನತಿಗಾಗಿ ನಡೆದ ಹೋರಾಟವಾಗಿತ್ತೆಂದು ತಿಳಿಸಿದರು.
ದೇಶದಲ್ಲಿ ಆಡಳಿತವನ್ನು ನಡೆಸುತ್ತಿರುವ ಮೋದಿ ಸರ್ಕಾರವೂ ಸಹ ಅಂಬೇಡ್ಕರ್ ಅವರ ಆಶಯವನ್ನು ಹೊಂದಿದೆ. ಅವರು ಯಾರು ಮುಂದೆ ಬರಬೇಕೆಂದು ಆಶಿಸಿದ್ದರು. ಅವರಿಗೆ ಮೋದಿ ಸರ್ಕಾರ ಸಹಾಯ ಮಾಡಿದೆ. ಅವರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ನೀಡುವ ಮೂಲಕ ಅವರನ್ನು ಮುಂದಕ್ಕೆ ತರುವ ಕಾರ್ಯ ಮಾಡುತ್ತಿದೆ. ಇದರಲ್ಲಿ ಉಜ್ವಲ, ಮುದ್ರಾ ಯೋಜನೆ, ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ. ಈ ಎಲ್ಲಾ ಯೋಜನೆಗಳು ಅಂಬೇಡ್ಕರ್ ಅವರ ದೃಷ್ಟಿಕೋನದ ಮಾರ್ಗದಲ್ಲಿದೆ ಎಂದರು.
ಅಂಬೇಡ್ಕರ್ ಅವರು ಕರ್ನಾಟಕದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ರಾಜ್ಯದ ದಲಿತರ ಅಭಿವೃದ್ದಿಗೆ ಶ್ರಮಿಸಿದ್ದರು. ಈಗಿನ ಬೋಮ್ಮಾಯಿ ಸರ್ಕಾರವೂ ಸಹ ಅಂಬೇಡ್ಕರವರ ಆಶಯವನ್ನು ಈಡೇರಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಉತ್ತೇಜಿಸಲು ಎಸ್.ಸಿ. ಮತ್ತು ಎಸ್.ಟಿ.ಯವರಿಗೆ ಶೇ.೯೦ ರಷ್ಟು ಸಹಾಯ ಧನ ನೀಡಿದೆ. ಆಯವ್ಯಯದಲ್ಲಿ ಶೆ.೨೪.೧೦ ರಷ್ಟು ಹಂಚಿಕೆಯನ್ನು ಎಸ್.ಸಿ., ಎಸ್.ಟಿ.ಯವರಿಗಾಗಿ ಮೀಸಲಿಡಲಾಗಿದೆ. ಇದು ಹಿಂದಿನ ವರ್ಷದ ಹಂಚಿಕೆಗಿಂತ ೨೨೨೯ ಕೋಟಿ ಹೆಚ್ಚಾಗಿದೆ. ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಯೋಜನೆಯ ಅನುಷ್ಠಾನವನ್ನು ಇನ್ನಷ್ಟು ಬಲಪಡಿಸಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಮತ್ತು ಕಲುಬುರಗಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಲ್ಪಸಂಖ್ಯಾತರ ಉದ್ಯೋಗಿ ಮಹಿಳೆಯರಿಗಾಗಿ ಹಾಸ್ಟಲ್‌ಗಳನ್ನು ಪ್ರಾರಂಭಿಸಲಾಗುವುದು. ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಎಸ್.ಸಿ., ಎಸ್.ಟಿ. ಯುವಕರಲ್ಲಿ ಆತ್ಮವಿಶ್ವಾಸ ತುಂಬಲು ಸರ್ಕಾರವೂ ಮೊದಲ ಬಾರಿಗೆ ೧.೫೦ ಲಕ್ಷ ವೆಚ್ಚದ ಎಲೆಕ್ಟ್ರಿಕಲ್ ವಾಹನ ಸರಕುಗಳ ವಾಹನ ಖರೀದಿಸಲು ೫೦ ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಅಂಬೇಡ್ಕರ್ ವಿವಿಧ ಜಾತಿಗಳ ಮತ್ತು ಪಂಗಡಗಳ ನಡುವೆ ಸಾಮರಸ್ಯಕ್ಕಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ್ದರಿಂದ ಅವರ ಜನ್ಮ ದಿನವನ್ನು ಭಾರತದಲ್ಲಿ ಸಮಾನತೆ ದಿನ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಪಾಂಡುರಂಗಪ್ಪ, ಉಪಾಧ್ಯಕ್ಷ ಪರಶುರಾಮ್, ಮಲ್ಲೇಶಪ್ಪ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!