ಭಾರತದ ಓಲೈಕೆಗೀಗ ಅಮೆರಿಕ-ರಷ್ಯಗಳ ನಡುವೆ ಪೈಪೋಟಿ- ಬಿಡೆನ್ ಸಲಹೆಗಾರ, ರಷ್ಯ ಸಚಿವರ ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಮೆರಿಕ ಸರ್ಕಾರದ ಸಲಹೆಗಾರ ದಲೀಪ್ ಸಿಂಗ್ ಎರಡು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಇದೇ ವೇಳೆ, ಮಾಧ್ಯಮ ವರದಿಗಳ ಪ್ರಕಾರ ರಷ್ಯದ ವಿದೇಶ ಸಚಿವ ಸರ್ಜಿ ಲ್ಯಾವ್ರೊವ್ ಸಹ ಭಾರತಕ್ಕೆ ಇದೇ ವಾರ ಭೇಟಿ ನೀಡಲಿದ್ದಾರೆ. ರಷ್ಯ-ಉಕ್ರೇನ್ ಸಂಘರ್ಷದ ನಡುವೆ ಎರಡು ಭಿನ್ನ ನೆಲೆಗಳ ಆಡಳಿತ ಪ್ರಮುಖರು ಭಾರತ ಭೇಟಿ ನೀಡುತ್ತಿರುವುದು ಜಾಗತಿಕ ರಾಜಕೀಯದಲ್ಲಿ ಭಾರತದ ಪ್ರಾಮುಖ್ಯವನ್ನು ಜಗತ್ತಿಗೆ ಸಾರಿದೆ.

ಬಿಡೆನ್ ಆಡಳಿತದ ಮುಖ್ಯ ವ್ಯಕ್ತಿ ದಿಲೀಪ್ ಸಿಂಗ್ ಅವರು ನಿಭಾಯಿಸುತ್ತಿರುವ ಹುದ್ದೆ – ಅಂತಾರಾಷ್ಟ್ರೀಯ ಆರ್ಥಿಕ ಚಟುವಟಿಕೆಗಳ ಮೇಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ. ಜೊ ಬಿಡೆನ್ ಆಡಳಿತವು ರಷ್ಯದ ಮೇಲೆ ಹೇರಿರುವ ಅನೇಕ ಆರ್ಥಿಕ ನಿರ್ಬಂಧಗಳ ನಿರೂಪಣೆಯಲ್ಲಿ ಇವರ ಪಾತ್ರ ಹಿರಿದಾದದ್ದು.

ಇನ್ನು, ರಷ್ಯವಂತೂ ಭಾರತದ ತಟಸ್ಥ ನಿಲುವನ್ನು ಪ್ರಶಂಸಿಸಿದೆಯಲ್ಲದೇ, ಪಾಶ್ಚಾತ್ಯ ರಾಷ್ಟ್ರಗಳು ಹೊಸ-ಹೊಸ ನಿರ್ಬಂಧಗಳನ್ನು ಹೇರಿರುವ ಸಂದರ್ಭದಲ್ಲಿ ತೈಲ ಸೇರಿದಂತೆ ತನ್ನ ಹಲವು ವಸ್ತುಗಳನ್ನು ಮಾರುವುದಕ್ಕೆ ಭಾರತವನ್ನು ಪ್ರಮುಖ ತಾಣವನ್ನಾಗಿ ನೋಡುತ್ತಿದೆ. ಈ ವಿಚಾರದಲ್ಲಿ ಭಾರತಕ್ಕೆ ಕೆಲವು ರಿಯಾಯತಿಗಳು ಸಿಗುವ ಸೂಚನೆಗಳಿವೆ.

ಇನ್ನು, ಅಮೆರಿಕವು ಭಾರತದ ಮೇಲೆ ಏನೇ ಸಿಟ್ಟು ಮಾಡಿಕೊಂಡರೂ ಇಂಡೊ-ಫೆಸಿಫಿಕ್ ಭಾಗದಲ್ಲಿ ಚೀನಾವನ್ನು ಎದುರಿಸುವುದಕ್ಕೆ ಭಾರತದ ಸಹಕಾರವಿಲ್ಲದೇ ಸಾಧ್ಯವೇ ಇಲ್ಲ. ಹೀಗಾಗಿ ಅದೀಗ ಭಾರತವನ್ನು ಓಲೈಸುವ ನಿಟ್ಟಿನಲ್ಲಿ, 2+2 ಮಾತುಕತೆಯನ್ನೂ ಚುರುಕುಗೊಳಿಸುವುದಾಗಿ ಹೇಳುತ್ತಿದೆ.

ಭಾರತದ ರಕ್ಷಣಾ ಮತ್ತು ವಿದೇಶ ಸಚಿವರು ಅಮೆರಿಕ ಆಡಳಿತದ ತತ್ಸಮಾನ ಸಚಿವರೊಂದಿಗೆ ನಡೆಸುತ್ತಿರುವ ಮಾತುಕತೆಯೇ 2+2.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!