ವಿಜಯನಗರ ಅರಸರ ಕಾಲದ ಲೇಪಾಕ್ಷಿ ದೇಗುಲ ಯುನೆಸ್ಕೋದ ಪರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿರುವ ವಿಜಯನಗರ ಅರಸರ ಕಾಲಕ್ಕೆ ಸೇರಿದ ಬೃಹತ್‌ ಏಕಶಿಲಾ ನಂದಿ ವಿಗ್ರಹ ಹೊಂದಿರುವ ವೀರಭದ್ರ ಸ್ವಾಮಿ ದೇವಾಲಯವು ಯುನೆಸ್ಕೋದ ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಂಡಿದೆ.
ಕ್ರಿಶ 1538 ರಲ್ಲಿ ವಿಜಯನಗರ ಅರಸರ ಸೇವೆಯಲ್ಲಿದ್ದ ವಿರೂಪಣ್ಣ ಮತ್ತು ವೀರಣ್ಣ ಈ ಇಬ್ಬರು ಸಹೋದರರು ಈ ದೇವಾಲಯವನ್ನು ನಿರ್ಮಿಸಿದ್ದಾರೆಂಬ ಪ್ರತೀತಿಯಿದೆ. ವಿಜಯನಗರ ಶೈಲಿಯ ಅದ್ಭುತ ವಾಸ್ತುಶಿಲ್ಪ ಹೊಂದಿರುವ ದೇವಾಲಯವು ನೇತಾಡುವ ಕಂಬಗಳಿಗೆ ವಿಶ್ವಪ್ರಸಿದ್ಧಿ ಪಡೆದುಕೊಂಡಿದೆ. ಈ ಲೇಪಾಕ್ಷಿ ದೇವಾಲಯವು 70 ಕಂಭಗಳ ಮೇಲೆ ನಿಂತಿದೆ. ಆದರೆ ಈ 70 ಕಂಭಗಳಲ್ಲಿ ಯಾವೊಂದು ಕಂಬವೂ ನೆಲವನ್ನು ಸ್ಪರ್ಶಿಸುವುದಿಲ್ಲ ಎಂಬುದು ಇಲ್ಲಿನ ನಿಗೂಢ ವಿಸ್ಮಯವಾಗಿದೆ.
ಈ ದೇಗುಲವಿರುವ ಸ್ಥಳವು ಪುರಾಣಪ್ರಸಿದ್ದವಾಗಿದೆ. ರಾಮಾಯಣದಲ್ಲಿ ಲಂಕಾದ ರಾಜ ರಾವಣ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಕರೆದೊಯ್ಯುತ್ತಿದ್ದಾಗ ಆತನೊಡನೆ ಹೋರಾಟ ನಡೆಸಿ ಗಾಯಗೊಂಡ ಜಟಾಯು ಪಕ್ಷಿಯುಈ ಸ್ಥಳದಲ್ಲಿ ಬಿದ್ದಿತೆಂಬುದು ನಂಬುಗೆಯಿದೆ ರಾಮನು ಪಕ್ಷಿಯನ್ನು ನೋಡಿ ಕನಿಕರದಿಂದ “ಲೇ ಪಕ್ಷಿ” ತೆಲುಗಿನಲ್ಲಿ- ಎದ್ದೇಳು ಪಕ್ಷಿ) ಎಂದಿರುವುದರಿಂದ ಲೇಪಾಕ್ಷಿ ಎಂಬ ಹೆಸರು ಬಂದಿದೆ ಎಂಬ ಸ್ಥಳಮಹತ್ಮೆಯಿದೆ.
ದೇವಾಲಯದ ಎದುರಿಗಿರುವ ಆರು ಮೀಟರ್‌ ಎತ್ತರವಿರುವ ಬೃಹತ್‌ ಏಕಶಿಲಾ ನಂದಿ ವಿಗ್ರಹವೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!