ಅಮೃತಯಾತ್ರೆ: ಆಹಾರಧಾನ್ಯಗಳ ಇಳುವರಿಯಲ್ಲಿ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತ ಕೃಷಿ ಪ್ರಧಾನ ದೇಶ. ಭಾರತದ 60 ಶೇಕಡಾದಷ್ಟು ಜನರಿಗೆ ಕೃಷಿಯೇ ಜೀವನಾಧಾರ. ಭಾರತದ ಒಟ್ಟಾರೆ ಜಿಡಿಪಿಯಲ್ಲಿ ಕೃಷಿಯ ಪಾಲು 17 ಶೇಕಡಾಕ್ಕಿಂತಲೂ ಹೆಚ್ಚಿದೆ. ಸ್ವಾತಂತ್ರ್ಯ ಬಂದ ನಂತರವೂ ಕೃಷಿಗೆ ಆದ್ಯತೆ ನೀಡಲಾಗಿದ್ದು ಇಂದು ಜಗತ್ತಿನ ಎರಡನೇ ಅತಿದೊಡ್ಡ ಗೋಧಿ ಹಾಗು ಅಕ್ಕಿಯ ಉತ್ಪಾದಕನಾಗಿ ಭಾರತ ಹೊರಹೊಮ್ಮಿದೆ. ಆಹಾರ ಧಾನ್ಯಗಳ ಉತ್ಪಾದನೆ ಭಾರತದ ಕೃಷಿಯಲ್ಲಿ ಪ್ರಮುಖವಾದದ್ದು. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವ ಹೊತ್ತಿಗೆ ಭಾರತದ ಕೃಷಿ ಕ್ಷೇತ್ರದಲ್ಲಿ ಪ್ರತಿ ಹೆಕ್ಟೇರ್‌ ಗೆ ಆಹಾರಧಾನ್ಯಗಳ ಇಳುವರಿಯಲ್ಲಾದ ಏರಿಕೆಯ ಬಗ್ಗೆ ನೀವು ತಿಳಿಯಲೇ ಬೇಕು.

1951ರಲ್ಲಿ ಭಾರತದಲ್ಲಿ ಪ್ರತಿ ಹೆಕ್ಟೇರ್‌ ಗೆ 757 ಕೆಜಿಗಳಷ್ಟು ಇಳುವರಿ ಬರುತ್ತಿತ್ತು. ಈ ಪ್ರಮಾಣದಲ್ಲಿ ಏರಿಕೆಯಾಗಿ 2020-21 ರ ಹೊತ್ತಿಗೆ ಪ್ರತಿ ಹೆಕ್ಟೇರಿಗೆ 2,386 ಕೆಜಿಗಳಷ್ಟು ಇಳುವರಿ ಬರುತ್ತಿದ್ದೆ. ಹೆಚ್ಚುಕಡಿಮೆ 3ಪಟ್ಟು ಏರಿಕೆಯಾಗಿದೆ. ಇದಕ್ಕೆ ಪೂರಕವಾಗಿ ಭಾರತವು ಕೈಗೊಂಡಿರುವ ಅನೇಕ ಕ್ರಮಗಳು ಈ ಏರಿಕೆಗೆ ಕಾರಣವಾಗಿವೆ. ಕೃಷಿಗೆ ನೀಡಿದ ಉತ್ತೇಜನ ಭಾಗವಾಗಿ ʼಹಸಿರು ಕ್ರಾಂತಿʼಯನ್ನೂ ಸಾಧಿಸಿದೆ. ಆ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರತೆ ಸಾಧಿಸಿದೆ. ರೈತರನ್ನು ಪ್ರೋತ್ಸಾಹಿಸಲು ಬೆಂಬಲ ಬೆಲೆಗಳ ಘೋಷಣೆ, ಕೃಷಿ ಕೇಂದ್ರಗಳ ಸ್ಥಾಪನೆ, ಮಣ್ಣು ಪರೀಕ್ಷೆಯಂತಹ ವೈಜ್ಞಾನಿಕ ಸುಧಾರಣೆಗಳು, ಸೂಕ್ತ ನೀರಾವರಿ ಯೋಜನೆಗಳ ಜಾರಿ, ರಾಸಾಯನಿಕ ಗೊಬ್ಬರಗಳ ವಿತರಣೆ ಮುಂತಾದ ವಿಷಯಗಳಲ್ಲಿ ಅನೇಕ ಉಪಕ್ರಮಗಳನ್ನು ಜಾರಿ ಮಾಡಲಾಗಿದೆ. ಇವೆಲ್ಲದರ ಪರಿಣಾಮ ಪ್ರತಿ ಹೆಕ್ಟೇರ್‌ ಇಳುವರಿಯಲ್ಲಿ ಏರಿಕೆಯಾಗಿದೆ. ಇಂದು ಜಗತ್ತಿನ ಎರಡನೇ ಅತಿದೊಡ್ಡ ಗೋಧಿ, ಅಕ್ಕಿಯ ಉತ್ಪಾದಕನಾಗಿ ದೇಶ ಹೊರಹೊಮ್ಮಿದ್ದರೆ ಸಿರಿಯಾ, ಈಜಿಪ್ತ್‌ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಭಾರತ ಆಹಾರ ಧಾನ್ಯಗಳ ಮಾನವೀಯ ನೆರವು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!