ಚಿನ್ನದ ಹಾರಕ್ಕೆ ಕನ್ನ: ದೇವಿಯ ಕಲಶಕ್ಕೆ ಹಾಕಿದ ಸರ ಮಾಯಾ

ಹೊಸದಿಗಂತ ವರದಿ, ಅಂಕೋಲಾ:

ವರಮಹಾಲಕ್ಷ್ಮಿ ಪೂಜೆಯ ನಿಮಿತ್ತ ಪ್ರತಿಷ್ಠಾಪಿಸಿದ ದೇವಿಯ ಕಲಶಕ್ಕೆ ಹಾಕಲಾದ ಸುಮಾರು 1.20 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಹಾರವನ್ನು ಪೂಜೆಗೆ ಬಂದ ಯಾರೋ ಕದ್ದೊಯ್ದ ಘಟನೆ ತಾಲೂಕಿನ ಕೇಣಿಯಲ್ಲಿ ನಡೆದಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಂಕೋಲಾ ಘಟಕದಲ್ಲಿ ಮ್ಯಾಕಾನಿಕಲ್ ಇಂಜಿನಿಯರ್ ಆಗಿರುವ ಕೇಣಿ ನಿವಾಸಿ ದೀಪಕ ಸುಭಾಷ್ ನಾಯ್ಕ ಎನ್ನುವವರ ಮನೆಯಲ್ಲಿ ಸೆಪ್ಟೆಂಬರ್ 8 ರಂದು ಶ್ರಾವಣ ಮಾಸದ ಶುಕ್ರವಾರದ ಪ್ರಯುಕ್ತ ವರಮಹಾಲಕ್ಷ್ಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪೂಜೆಗೆಂದು ಬಹಳಷ್ಟು ಜನ ಬಂಧು ಮಿತ್ರರು ಮನೆಗೆ ಬಂದು ಹೋಗಿದ್ದು ಸಂಜೆ ಸಮಯದಲ್ಲಿ ದೇವಿಯ ಮುಖವಾಡ ಧರಿಸಿರುವ ಕಲಶಕ್ಕೆ ತೊಡಿಸಲಾಗಿದ್ದ ಬಂಗಾರದ ಹಾರ ಕಳ್ಳತನ ಮಾಡಿರುವುದು ಮನೆಯವರ ಗಮನಕ್ಕೆ ಬಂದಿದೆ.

ವರಮಹಾಲಕ್ಷ್ಮಿ ಪೂಜೆಗೆ ಬಂದವರಲ್ಲೇ ಯಾರೋ ಒಬ್ಬರು ಹತ್ತಿರದಲ್ಲಿ ಮದ್ಯಾಹ್ನ 3 ಗಂಟೆಯಿಂದ ಸಂಜೆ 6.30 ಗಂಟೆಯ ನಡುವಿನ ಅವಧಿಯಲ್ಲಿ ಹತ್ತಿರ ಯಾರೂ ಇಲ್ಲದ ಸಮಯ ನೋಡಿ ಸುಮಾರು 27 ಗ್ರಾಂ ತೂಕದ ಬಂಗಾರದ ಹಾರವನ್ನು ತುಂಡರಿಸಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.

ಹಾರದ ಹಿಂಬದಿ ಭಾಗದ ಸಣ್ಣ ಚೈನಿನ ತುಂಡು ಕಳಸದ ಬಳಿ ಪತ್ತೆಯಾಗಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!