ವಿಜಯನಗರ ಜಿಲ್ಲೆಗಾಗಿ ಆನಂದ್ ಸಿಂಗ್ ತ್ಯಾಗ ಮೆಚ್ಚುವಂತಹದ್ದು: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ವಿಜಯನಗರ:  

ವಿಜಯನಗರ ನೂತನ ಜಿಲ್ಲೆಗಾಗಿ ಆನಂದ್ ಸಿಂಗ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ತ್ಯಾಗ ಮಾಡಿದ್ದಾರೆ, ಅವರಲ್ಲಿ ಜನರ ಬಗ್ಗೆ ಇರುವ ಕಳಕಳಿ, ಕಾಳಜಿ‌ ನಿಜಕ್ಕೂ ಮೆಚ್ಚುವಂತಹದ್ದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು‌ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ನೂತನ ಜಿಲ್ಲೆ ಆಗಬೇಕು, ನನಗೆ ಸಚಿವ ಸ್ಥಾನ ಬೇಡ, ಯಾವುದೇ ಸ್ಥಾನಮಾನ ಬೇಡ, ನಮ್ಮ ಜನರಿಗೆ ನೂತನ ಜಿಲ್ಲೆ ರಚನೆಯಾದರೇ ಒಳ್ಳೆಯದಾಗಲಿದೆ, ಅಭಿವೃದ್ಧಿಗೂ ಮತ್ತಷ್ಟು ವೇಗ ಸಿಗಲಿದೆ ಎಂದು ಸಚಿವ ಆನಂದ್ ಸಿಂಗ್ ಅವರು ಹೇಳಿದ್ದರು. ಜಿಲ್ಲೆಯ ಜನರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸಣ್ಣ ಮಾತಲ್ಲ, ಆನಂದ್ ಸಿಂಗ್ ಅವರ ಬೇಡಿಕೆಗೆ ಸ್ಪಂದಿಸಿದ ನಮ್ಮ ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆ ಘೋಷಣೆ ಮಾಡಿ, ಅಗತ್ಯ ಅನುದಾನವನ್ನು ಮಂಜೂರು ಮಾಡಿ ದಾಖಲೆ ಸೃಷ್ಟಿಸಿದರು. ತಾನಷ್ಟೇ ಅಲ್ಲ, ಜಿಲ್ಲೆಯ ಜನರನ್ನೂ ಆನಂದಿಸಬೇಕು ಎನ್ನುವ ಸ್ವಭಾವ ಆನಂದ್ ಸಿಂಗ್ ಅವರದ್ದು, ಜನರಿಗೆ ಅನ್ಯಾಯವಾದರೇ ಸಿಂಹ, ಅವರು, ಒಳ್ಳೆಯದು ಮಾಡಿದರೇ ಆನಂದ, ಅನ್ಯಾಯವಾದರೇ ಸಿಂಹರೂಪ ತಾಳಲಿದ್ದಾರೆ ಎಂದು ಬಣ್ಣಿಸಿದರು.

ಒಂದೇ ವೇದಿಕೆಯಲ್ಲೇ 75 ಸಮುದಾಯದ ನಾಯಕರನ್ನು ಕೂಡಿಸಿ ಇತಿಹಾಸ ಸೃಷ್ಟಿಸಿದ್ದಾರೆ, ಬಿಜೆಪಿ ಎಲ್ಲ ವರ್ಗದವರ ಪರವಿದೆ ಎಂಬುದನ್ನು ಈ ಮೂಲಕ ಸಾಬೀತು ಪಡೆಸಿದ್ದಾರೆ ಎಂದರು. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ನಮ್ಮ ಭಾರತ ಆರ್ಥಿಕ ಸಮತೋಲನದಲ್ಲಿದೆ, ಬಹುತೇಕ ರಾಷ್ಟ್ರಗಳು ಏರಿಳಿತ ಕಂಡರೇ, ನಮ್ಮ‌ಭಾರತ ಸಮತೊಲನದಲ್ಲಿದೆ, ಮೋದಿಜೀ ಅವರ ಬಗ್ಗೆ ಮಾತನಾಡುವವರು ಇದನ್ನು ಗಮನಿಸಬೇಕು, ಇದನ್ನು‌ ನಾವಲ್ಲ, ವರದಿ ತಿಳಿಸಿದೆ ಎಂದರು.

ಪ್ರವಾಸೋದ್ಯಮ ಸಚಿವ ಅನಂದ್ ಸಿಂಗ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಜಲಸಂಪನ್ಮೂಲ ಸಚಿವ ಗೋವಿಂದ‌ ಕಾರಜೋಳ್, ಸುರಪುರ ಶಾಸಕ ರಾಜೂಗೌಡ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಖಾತೆ ಸಚಿವ ಹಾಲಪ್ಪ ಆಚಾರ್, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ‌ ಅಣ್ಣಾ ಸಾಹೇಬ್ ಜೊಲ್ಲೆ, ಎಮ್ಮೆಲ್ಸಿ ಗಳಾದ ರವಿ ಕುಮಾರ್, ಶಶಿಲ್‌ ನಮೋಶಿ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದ ಚೆನ್ನಬಸವನಗೌಡ ಪಾಟೀಲ್, ನಗರಸಭೆ ಅಧ್ಯಕ್ಷೆ ಸುಂಕಮ್ಮ, ವಿಭಾಗ್ ಪ್ರಮುಖ್ ಸಿದ್ದೇಶ್ ಯಾದವ್, ಮಂಡಲ ಅಧ್ಯಕ್ಷ ಉಮಾಪತಿ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!