Monday, July 4, 2022

Latest Posts

80ಕ್ಕೂ ಹೆಚ್ಚಿನ ಕಾಮುಕರಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ; ಆರೋಪಿಗಳು ಅಂದರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
13 ವರ್ಷದ ಬಾಲಕಿಯ ಮೇಲೆ 80ಕ್ಕೂ ಅಧಿಕ ಕಾಮುಕರು ಬರೋಬ್ಬರಿ 8 ತಿಂಗಳುಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯೊಂದು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಉಪಾಯವಾಗಿ ಬಾಲಕಿಯನ್ನು ತಮ್ಮ ವಶಕ್ಕೆ ಪಡೆದಿದ್ದ ಆರೋಪಿಗಳು ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದರು. ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ವೇಶ್ಯಾ ಗೃಹಗಳಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗುತ್ತಿತ್ತು. ಸದ್ಯ ಗುಂಟೂರು ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದು, 80 ಮಂದಿಯನ್ನು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಒಪ್ಪಿಸಿದ ಪ್ರಮುಖ ಆರೋಪಿ ಸುವರ್ಣಕುಮಾರಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಜೂನ್​ ತಿಂಗಳಲ್ಲಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಬಾಲಕಿಯ ತಾಯಿಯೊಂದಿಗೆ ಸುವರ್ಣ ಕುಮಾರಿ ಸ್ನೇಹ ಸಂಪಾದಿಸಿದ್ದಳು.
ದುರಾದೃಷ್ಟವಶಾತ್‌ ಬಾಲಕಿ ತಾಯಿ ಕೊರೋನಾದಿಂದ ಸಾವನ್ನಪ್ಪಿದರು. ಈ ವೇಳೆ ಅಪ್ರಾಪ್ತ ಸಂತ್ರಸ್ತೆಯನ್ನು ಸುವರ್ಣ ಕುಮಾರಿ ದತ್ತು ಪಡೆದರು, ಬಾಲಕಿಯ ತಂದೆಗೂ ಮಾಹಿತಿ ನೀಡದೇ ಆಕೆಯನ್ನು ಕರೆದೊಯ್ದಳು. ಬಳಿಕ ಬಾಲಕಿಯನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣಗಳಲ್ಲಿ ವಿವಿಧ ವೇಶ್ಯಾವಾಟಿಕೆ ಗೃಹಗಳಿಗೆ ತಳ್ಳಲಾಗಿತ್ತು. ಬರೋಬ್ಬರಿ 8 ತಿಂಗಳುಗಳ ಕಾಲ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ.
2021 ರ ಆಗಸ್ಟ್‌ ನಲ್ಲಿ ಬಾಲಕಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದಳು. ನಂತರ ಇದೀಗ ಪೊಲೀಸರು ಸುವರ್ಣಕುಮಾರಿ ಸೇರಿದಂತೆ 80 ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮೊದಲ ಬಂಧನವನ್ನು ಜನವರಿ 2022 ರಲ್ಲಿ ಮಾಡಲಾಗಿತ್ತು. ಬಿ.ಟೆಕ್ ವಿದ್ಯಾರ್ಥಿ ಸೇರಿದಂತೆ 10 ಜನರನ್ನು ಏಪ್ರಿಲ್ 19 ರಂದು ಬಂಧಿಸಲಾಗಿದೆ. ಪೊಲೀಸರು ಅಪರಾಧದಲ್ಲಿ ಭಾಗಿಯಾಗಿರುವ ಎಲ್ಲಾ 80 ಜನರನ್ನು ಬಂಧಿಸಿದ್ದಾರೆ ಮತ್ತು ಈ ಘಟನೆಯಲ್ಲಿ ಪಾತ್ರವಿರುವ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಹುಡುಗಿಯ ವಯಸ್ಸು ಮತ್ತು ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡ ಹಲವಾರು ಗ್ಯಾಂಗ್‌ಗಳು ಹುಡುಗಿಯನ್ನು ಖರೀದಿಸಿ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳ ಹಲವಾರು ಸ್ಥಳಗಳಿಗೆ ಕರೆದೊಯ್ದು ವೇಶ್ಯಾವಾಟಿಕೆಗೆ ನಡೆಸುತ್ತಿದ್ದವು ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸುಪ್ರಜಾ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss