ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗುವ ಭವ್ಯ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ನಿಗದಿಯಾಗಿದೆ ಮುಹೂರ್ತ. ಆದರೆ ಬೃಹತ್ ಮಂದಿರದಲ್ಲಿರುವ ದೇವರ ವಿಗ್ರಹ ಹೇಗಿರಲಿದೆ? ಈ ಪ್ರಶ್ನೆಗೂ ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಉತ್ತರ ಸಿಕ್ಕಿದೆ!
ಜನ್ಮಭೂಮಿ ರಾಮ ಮಂದಿರದ ಗರ್ಭಗೃಹದಲ್ಲಿ ಕಳೆದ ಏಳು ದಶಕಗಳಿಂದ ರಾಮಭಕ್ತರಿಂದ ಆರಾಧಿಸಲ್ಪಡುತ್ತಾ ಬಂದಿರುವ ಗೇಣುದ್ದದ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠೆ ಮಾಡುವುದಿಲ್ಲ. ಅದು ಏನಿದ್ದರೂ ಉತ್ಸವ ಮೂರ್ತಿಯ ರೂಪ ಪಡೆಯಲಿದೆ. ರಾಮ ಜನ್ಮಭೂಮಿಯ ಮಂದಿರವಾಗಿರುವುದರಿಂದ ಗರ್ಭಗೃಹದಲ್ಲಿ ಬಾಲರೂಪದ ರಾಮನ ಮೂರ್ತಿ ಪ್ರತಿಷ್ಠೆ ಮಾಡಲಾಗುತ್ತದೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂಗಳವಾರದ ಸಭೆಯಲ್ಲಿ ನಿರ್ಧರಿಸಿದೆ.
ಜನ್ಮಭೂಮಿಯ ರಾಮ ಮಂದಿರ ನಿರ್ಮಿಸಿದ ನಂತರ, ಅಲ್ಲಿ ಪ್ರಾಣ ಪ್ರತಿಷ್ಠೆ ಮಾಡುವ ದೇವರ ವಿಗ್ರಹ ಯಾವ ರೀತಿ ಇರಬೇಕು? ಲೋಹದಿಂದ ಮಾಡಿರಬೇಕೇ ಅಥವಾ ಶಿಲೆಯಿಂದ ನಿರ್ಮಿಸಿರಬೇಕೇ? ಲೋಹವಾದರೆ ಯಾವ ಲೋಹ? ಒಂದು ವೇಳೆ ವಿಗ್ರಹ ಶಿಲೆಯದ್ದಾದರೆ, ಯಾವ ಶಿಲೆ? ದಕ್ಷಿಣ ಭಾರತದಂತೆ ಕಪ್ಪು ಶಿಲೆಯೋ ಅಥವಾ ಉತ್ತರ ಭಾರತದಲ್ಲಿ ಬಳಕೆಯಲ್ಲಿರುವಂತೆ ಬಿಳಿಯ ಅಮೃತ ಶಿಲೆಯೋ? ಎರಡೂ ಅಲ್ಲದೇ ಬೂದು ಬಣ್ಣದ ಸಾಲಿಗ್ರಾಮ ಶಿಲೆಯೋ? ವಿಗ್ರಹದ ಗಾತ್ರ ಎಷ್ಟು ದೊಡ್ಡದಾಗಿರಬೇಕು? ಆಕಾರ ಹೇಗಿರಬೇಕು? ಮುಖ ಹೇಗಿರಬೇಕು? ಇತ್ಯಾದಿ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ.
ಅಯೋಧ್ಯೆಯಲ್ಲಿ ನಡೆಯಲಿದೆ ವಿಗ್ರಹ ಕೆತ್ತನೆ:
ವಿಗ್ರಹವನ್ನು ಎಲ್ಲಿ ಕೆತ್ತಬೇಕು ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಲಭ್ಯವಾಗಿದೆ. ಜನ್ಮಭೂಮಿಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಮಾಡುವ ರಾಮನ ವಿಗ್ರಹದ ಕೆತ್ತನೆಗೆ ಕನಿಷ್ಠ 6 ತಿಂಗಳುಗಳು ಬೇಕಾಗಬಹುದು. ಆದ್ದರಿಂದ ಈ ವಿಗ್ರಹ ಕೆತ್ತನೆಯನ್ನು ಅಯೋಧ್ಯೆಯಲ್ಲಿಯೇ ಮಾಡಬೇಕೆಂದು ತೀರ್ಮಾನಿಸಲಾಗಿದೆ. ಆದರೆ ವಿಗ್ರಹ ಹೇಗಿರಬೇಕು ಎಂಬ ನಿರ್ಧಾರಗಳಿಗೆ ಮೂವರು ಸದಸ್ಯರ ಉಪಸಮಿತಿಯೊಂದನ್ನು ರಚಿಸುವುದಕ್ಕೆ ಸಭೆ ನಿರ್ಣಯ ತೆಗೆದುಕೊಂಡಿದೆ. ಈ ಸಮಿತಿಯು ದೇಶಾದ್ಯಂತದ ಸಂತರಿಂದ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತದೆ.
ಬಾಲ ರಾಮನ ಬೃಹತ್ ವಿಗ್ರಹ ಪ್ರತಿಷ್ಠಾಪನೆ:
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು, ಜನರು ಇಲ್ಲಿಯವರೆಗೆ ಪೂಜಿಸುತ್ತಿರುವ ವಿಗ್ರಹಗಳು ಉತ್ಸವ ಮೂರ್ತಿಗಳಾಗಿ ಬಳಕೆಯಾಗುತ್ತವೆ. ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡುವ ಶ್ರೀರಾಮನ ವಿಗ್ರಹವನ್ನು ಎಷ್ಟು ದೊಡ್ಡ ಮತ್ತು ಯಾವ ಶಿಲೆಯಿಂದ ಮಾಡಬೇಕು ಎಂಬ ಬಗ್ಗೆ ಸಂತರಿಂದ ಅಭಿಪ್ರಾಯ ಪಡೆಯಲಾಗುವುದು. ಇದರೊಂದಿಗೆ ಯಾವುದೇ ವಿಗ್ರಹ ಪ್ರತಿಷ್ಠಾಪಿಸುವುದಾದರೂ ಅದು ಶ್ರೀರಾಮನ ಮಗುವಿನ ರೂಪವಾಗಿರುತ್ತದೆ. ಆದರೆ ಬಾಲರಾಮನ ಬೃಹತ್ ವಿಗ್ರಹವನ್ನು ಪ್ರತಿಷ್ಠೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ವಿಗ್ರಹದ ಬಗ್ಗೆ ಏಕಾಏಕಿ ನಿರ್ಧಾರ ಮಾಡಲ್ಲ:
ʼರಾಮ ಮಂದಿರದ ಪ್ರಾಕಾರದಲ್ಲಿ ಗಣಪತಿ, ಸೀತಾ ಮಾತೆ, ಮಹರ್ಷಿ ವಾಲ್ಮೀಕಿ, ತುಳಸೀದಾಸರು… ಹೀಗೆ ಐದಾರು ಮಂದಿರಗಳು ನಿರ್ಮಾಣ ಆಗುತ್ತವೆ. ಶ್ರೀರಾಮ ದೇವರ ಮೂರ್ತಿಯ ಬಗ್ಗೆ ಏಕಾಏಕಿ ನಿರ್ಧಾರ ಮಾಡುವುದಿಲ್ಲ. ಅದಕ್ಕೊಂದು ಸಮಿತಿ ಮಾಡಿ ಎಲ್ಲರ, ಅದರಲ್ಲೂ ವಿಶೇಷವಾಗಿ ಸ್ಥಳೀಯ ಅಭಿಪ್ರಾಯದೊಂದಿಗೆ ನಿರ್ಮಿಸುವುದೆಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆʼ.
– ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ವಿಶ್ವಸ್ಥರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ