ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ನಂತರ ಒಂದೇ ಒಂದು ಪಂದ್ಯವನ್ನೂ ಆಡದಿದ್ದರೂ, ಟ್ರೇಡ್ ವಿಂಡೋದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿದ್ದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೊನೆಗೂ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಭಾರತದ ಟಿ20 ತಂಡದ ಅಗ್ರ ವಿಕೆಟ್ ಟೇಕರ್ ಅರ್ಷ್ದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ಗೆ ಬಿಟ್ಟುಕೊಡುವ ಮೂಲಕ ಪಂಜಾಬ್ ಫ್ರಾಂಚೈಸಿ ಹಾರ್ದಿಕ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಈ ಮೆಗಾ ವಿನಿಮಯಕ್ಕೆ ಬಿಸಿಸಿಐ ಅಧಿಕೃತ ಮುದ್ರೆ ಒತ್ತಿದ್ದು, 16.35 ಕೋಟಿ ರೂ. ಪಡೆಯುತ್ತಿದ್ದ ಹಾರ್ದಿಕ್ ಇನ್ಮುಂದೆ 18 ಕೋಟಿ ರೂ. ವೇತನಕ್ಕೆ ಪಂಜಾಬ್ ಪರ ಆಡಲಿದ್ದಾರೆ. ಅತ್ತ ಅರ್ಷ್ದೀಪ್ ಸಿಂಗ್ ಕೂಡ ತಮ್ಮ ಹಳೆಯ 18 ಕೋಟಿ ರೂ. ಮೊತ್ತದೊಂದಿಗೆ ಮುಂಬೈ ಪಾಳಯ ಸೇರಿದ್ದಾರೆ.
ಅಜಿಂಕ್ಯ ರಹಾನೆ ನಿವೃತ್ತಿಯಿಂದ ತೆರವಾಗಿದ್ದ ನಾಯಕತ್ವದ ಸ್ಥಾನ ತುಂಬಲು ಕೋಲ್ಕತ್ತಾ ನೈಟ್ ರೈಡರ್ಸ್ ಹಾರ್ದಿಕ್ಗಾಗಿ ತೀವ್ರ ಪೈಪೋಟಿ ನಡೆಸಿತ್ತು. ಆದರೆ, ಸುನಿಲ್ ನರೈನ್, ವರುಣ್ ಚಕ್ರವರ್ತಿ, ರಿಂಕು ಸಿಂಗ್ ಅಥವಾ ಯುವ ಆಟಗಾರರಾದ ಹರ್ಷಿತ್ ರಾಣಾ ಹಾಗೂ ಆಂಗ್ಕ್ರಿಶ್ ರಘುವಂಶಿ ಅವರನ್ನು ಬಿಟ್ಟುಕೊಡಲು ಕೆಕೆಆರ್ ಒಪ್ಪಲಿಲ್ಲ. ಇತ್ತ ಯಶಸ್ವಿ ಜೈಸ್ವಾಲ್ ಮತ್ತು ರವಿ ಬಿಷ್ಣೋಯ್ ಅವರನ್ನು ನೀಡಲು ರಾಜಸ್ಥಾನ್ ರಾಯಲ್ಸ್ ಮುಂದಾದರೂ, ಆ ಡೀಲ್ ಯಶಸ್ವಿಯಾಗಲಿಲ್ಲ. ಕೊನೆಗೆ ಅರ್ಷ್ದೀಪ್ ಸಿಂಗ್ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಿ ಪಂಜಾಬ್ ಕಿಂಗ್ಸ್ ಈ ರೇಸ್ ಗೆದ್ದುಕೊಂಡಿತು.
2015ರಿಂದ 2020ರವರೆಗೆ ಮುಂಬೈ ಇಂಡಿಯನ್ಸ್ನ ನಾಲ್ಕು ಪ್ರಶಸ್ತಿ ಗೆಲುವಿನಲ್ಲಿ ಮಿಂಚಿದ್ದ ಹಾರ್ದಿಕ್, 2024ರಲ್ಲಿ ರೋಹಿತ್ ಶರ್ಮಾ ಬದಲಿಗೆ ನಾಯಕರಾಗಿ ಮರಳಿದಾಗ ತೀವ್ರ ವಿರೋಧ ಎದುರಿಸಿದರು. 2024ರಲ್ಲಿ ತಂಡ ಕೊನೆಯ ಸ್ಥಾನ ಪಡೆದರೆ, 2026ರಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು.
ಡ್ರೆಸ್ಸಿಂಗ್ ರೂಮ್ ಅಸಮಾಧಾನದ ನಡುವೆ ಹಾರ್ದಿಕ್ ಮುಂಬೈ ತೊರೆಯುವುದು ಖಚಿತವಾಗಿತ್ತು. ಇದೀಗ 33ರ ಹರೆಯದ ಹಾರ್ದಿಕ್, ತಮಗೆ 2015ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿಸಿದ್ದ ಕೋಚ್ ರಿಕಿ ಪಾಂಟಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಜೊತೆ ಪಂಜಾಬ್ನಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. “ಸತ್ ಶ್ರೀ ಅಕಾಲ್. ನನ್ನ ನಾಯಕ ಶ್ರೇಯಸ್, ನನ್ನ ಕೋಚ್ ರಿಕಿ, ಇಡೀ ಪಂಜಾಬ್ ತಂಡದ ಬೆನ್ನಿಗೆ ನಾನಿದ್ದೇನೆ” ಎಂದು ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.



