ಆಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿರುವುದು ಸಾರ್ಥಕ ಆಯ್ಕೆಯಾಗಿದೆ: ಸುತ್ತೂರು ಶ್ರೀ

ಹೊಸದಿಗಂತ, ಮೈಸೂರು:
ಭಾರತದ ಹಿರಿಯರಾಜಕೀಯ ಮುತ್ಸದ್ದಿಗಳಾದ ಎಲ್.ಕೆ.ಆಡ್ವಾಣಿಯವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿರುವುದು ಸಾರ್ಥಕ ಆಯ್ಕೆಯಾಗಿದೆ. ಇದು ದೇಶವಾಸಿಗಳಿಗೆ ಸಂತೋಷವನ್ನು ಉಂಟುಮಾಡಿದೆ ಎಂದು ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮಿ ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ ಬಲಗೈಯಾಗಿ ದುಡಿದ ಎಲ್.ಕೆ. ಆಡ್ವಾಣಿಯವರು ನಿಷ್ಕಾಮಕರ್ಮಕ್ಕೆ ಭಾಷ್ಯದಂತೆ ಇರುವವರು. ಭಾರತೀಯ ಜನತಾ ಪಕ್ಷದ ಪುನರುಜ್ಜೀವನದಲ್ಲಿ ಅವರು ಕೈಗೊಂಡ ರಥಯಾತ್ರೆ ಒಂದು ಪ್ರಮುಖಘಟ್ಟ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗಿರುವ ಶುಭ ಯಜ್ಞದ ರೂವಾರಿಗಳು ಅವರೇ ಎಂದರೆ ತಪ್ಪಾಗಲಾರದು. ರಾಜಕೀಯದ ಏಳುಬೀಳುಗಳು ಅವರನ್ನು ಎಂದೂ ಕುಗ್ಗಿಸಲಿಲ್ಲ. ಯಾರ ವಿರುದ್ಧವೂ ಅವರು ಕೆಟ್ಟ ಮಾತುಗಳನ್ನಾಡಲಿಲ್ಲ. ರಾಷ್ಟçಭಕ್ತಿಯನ್ನೇ ಉಸಿರಾಗಿಸಿಕೊಂಡ ಅವರು ಸ್ಥಿತ ಪ್ರಜ್ಞತೆಯನ್ನು, ಸಮಚಿತ್ತತೆಯನ್ನು ಸದಾ ಕಾಲವೂ ಕಾಯದುಕೊಂಡು ಬಂದ ವಿವೇಕಶಾಲಿಗಳು. ಸಂದು ಹೋದ ಮೌಲ್ಯಗಳ ಒಂದು ತಲೆಮಾರಿನ ಜೀವಂತ ಪ್ರತಿನಿಧಿ ಅವರು. ಆಡ್ವಾಣಿಯವರು ಶ್ರೀಮಠದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಆ ಸಂದರ್ಭಗಳಲ್ಲಿ ತೋರಿದ ಸರಳತೆ, ಆತ್ಮೀಯತೆ, ಅಭಿಮಾನಗಳು ನಮ್ಮ ಮನಸ್ಸಿನಲ್ಲಿ ಇಂದೂ ಹಸಿರಾಗಿವೆ. ಆಡ್ವಾಣಿಯವರಿಗೆ ‘ಭಾರತರತ್ನ’ ಪುರಸ್ಕಾರ ಲಭಿಸಿರುವುದಕ್ಕಾಗಿ ಶ್ರೀಮಠ ಮತ್ತು ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತ, ಅವರು ನಿರಂತರ ಮಾರ್ಗದರ್ಶನ ನೀಡುತ್ತಿರಲು ಭಗವಂತನು ಅವರಿಗೆ ಆಯುರಾರೋಗ್ಯಗಳನ್ನು ಕರುಣಿಸಲೆಂದು ಹಾರೈಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!