ಹೊಸದಿಗಂತ ಡಿಜಿಟಲ್ ಡೆಸ್ಕ್, ಮಂಗಳೂರು:
ಏರ್ ಫೋರ್ಸ್ ಗೆ ಮಂಗಳೂರಿನ ಶಕ್ತಿ ನಗರದ ಕುವರಿ ಮನಿಷಾ ಶೆಟ್ಟಿ ಆಯ್ಕೆಯಾಗಿದ್ದು, ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ತಂದೆಯ ಕನಸನ್ನು ಈಡೇರಿಸಿದ್ದಾಳೆ
ಮನಿಷಾ 6ನೇ ತರಗತಿಯಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿದ್ದರು. ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿ ಎನ್‌ಸಿಸಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿದ್ದರು. ಏರ್‌ಪೋರ್ಸ್‌ನ ಪೈಲಟ್‌ಗೆ ಆಯ್ಕೆಯಾಗಬೇಕೆಂದು ತಂದೆಯ ಕನಸಾಗಿತ್ತು. ಅದರಂತೆ ಈ ಹಿಂದೆ ಆರ್ಮಿ, ನೇವಿಗೂ ಆಯ್ಕೆಯಾಗಿದ್ದರೂ ಮನಿಷಾ ನಯವಾಗಿ ಅದರಿಂದ ಹಿಂಜರಿದರು. ಪೈಲಟ್ ಆಗುವ ಇಚ್ಛೆಯಿಂದ ಏರ್‌ಪೋರ್ಸ್ ಪ್ರಯತ್ನ ಮತ್ತೆ ಮುಂದುವರಿಸಿದರು. ಇದೀಗ ತನ್ನ ಕನಸು ನನಸಾದ ಖುಷಿಯಲ್ಲಿ ಮನಿಷಾ ಮತ್ತು ಮನೆಯವರು ಇದ್ದಾರೆ.
ಭಾರತೀಯ ಸೇನೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂಬ ತಂದೆಯ ಕನಸನ್ನು ಬೆನ್ನಟ್ಟಿ ಸಾಗಿದ ಕುಡ್ಲದ ಹುಡುಗಿ ಮನಿಷಾ ಕೊನೆಗೂ ಕನಸು ನನಸಾಗಿಸಿದ್ದಾಳೆ. ಈ ಮೂಲಕ ಏರ್‌ಫೋರ್ಸ್ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಆಯ್ಕೆಯಾದ ರಾಜ್ಯದ ಏಕೈಕ ಧೀರೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಅಶೋಕನಗರ ನಿವಾಸಿ ಭಾರತೀಯ ಸ್ಟೇಟ್‌ಬ್ಯಾಂಕ್‌ನ ನಿವೃತ್ತ ಅಧಿಕಾರಿ ಮನೋಹರ ಶೆಟ್ಟಿ ಮತ್ತು ನಮ್ಮ ಮರಕಡ ಸರಕಾರಿ ಶಾಲೆಯಲ್ಲಿ ಸೇವೆಗೈದು ಪ್ರಸ್ತುತ ಕಲ್ಕಟ್ಟಾ ಸರಾಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ, ರಂಗ ಸ್ವರೂಪ ಪ್ರಶಸ್ತಿ-2022 ಪುರಸ್ಕೃತರಾದ ಮಾಲತಿ ಶೆಟ್ಟಿ ದಂಪತಿಯ ಪುತ್ರಿ.
ಭಾರತೀಯ ವಾಯುಪಡೆಯ ಫ್ಲೈಯಿಂಗ್ ಬ್ರ್ಯಾಂಚ್‌ಗೆ ಆಯ್ಕೆಯಾದ ಮನಿಷಾ ಜು.9ರಂದು ತರಬೇತಿಗೆ ಹೈದರಾಬಾದ್‌ಗೆ ತೆರಳಲಿದ್ದಾರೆ.
ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮತ್ತು ಸೈಂಟ್ ಅಲೋಶಿಯಸ್‌ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ರಾಮಯ್ಯ ಕಾಲೇಜಿನ ಬಿಇ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮರ್ಸಿಡಿಸ್ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು.
ಮನಿಷಾ ಅವರ ತಂದೆ ಮನೋಹರ್ ಶೆಟ್ಟಿ ಈ ಹಿಂದೆ ವಾಯುಪಡೆಗೆ ಆಯ್ಕೆಯಾಗಿದ್ದರು. ಆದರೆ ಇವರ ಅಣ್ಣಾ ಏರ್‌ಫೋರ್ಸ್‌ನಲ್ಲಿದ್ದ ಕಾರಣ ತಂದೆ ಇವರಿಗೆ ಅನುಮತಿ ಕೊಡಲಿಲ್ಲ. ಈ ಕಾರಣದಿಂದ ತನ್ನ ಇಬ್ಬರು ಮಕ್ಕಳಲ್ಲಿ ಒಬ್ಬರನ್ನು ಪೈಲಟ್ ಮಾಡಬೇಕೆಂಬ ಕನಸು ಅವರದಾಗಿತ್ತು.
ಶಾಸಕ ಕಾಮತ್ ಅಭಿನಂದನೆ
ಏರ್ ಫೋರ್ಸ್ ಫ್ಲೈಯಿಂಗ್ ಬ್ರ್ಯಾಂಚ್ ಗೆ ಆಯ್ಕೆಯಾದ ಅಶೋಕನಗರ ನಿವಾಸಿ ಮನಿಷಾ ಶೆಟ್ಟಿ ಅವರನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಕಾರ್ಪೋರೇಟರ್ ಗಣೇಶ್ ಕುಲಾಲ್, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಹೆಗ್ಡೆ, ಗೌತಮ್ ಉರ್ವ, ರಾಕೇಶ್ ಚಿಲಿಂಬಿ, ರೋಶನ್ ರೊನಾಲ್ಡ್, ಸಾಯಿ ಪ್ರಸಾದ್, ಕಿರಣ್, ಅಜಿತ್, ಸ್ಥಳೀಯರು ಉಪಸ್ಥಿತರಿದ್ದರು.