October 10, 2026
Saturday, October 10, 2026
spot_img

ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಕ್ಷಮೆಯಾಚನೆ: ಸಂಸ್ಕೃತಿ ಮರೆತ ಬಾದ್‌ಶಾಗೆ ಭಯಹುಟ್ಟಿಸಿದ ಕಾನೂನು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ರ‍್ಯಾಪರ್ ಬಾದ್‌ಶಾ (ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ) ಅವರ ಹೊಸ ಹಾಡು ‘ಟಟೀರಿ’ ಈಗ ಅವರ ಪಾಲಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಈ ಹಾಡಿನ ದೃಶ್ಯಾವಳಿ ಮತ್ತು ಸಾಹಿತ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಹರಿಯಾಣ ಪೊಲೀಸರು ಗಾಯಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನೂ ಆರಂಭಿಸಿದ್ದಾರೆ.

‘ಟಟೀರಿ’ ಹಾಡಿನಲ್ಲಿ ಶಾಲಾ ಸಮವಸ್ತ್ರ ಧರಿಸಿದ ಅಪ್ರಾಪ್ತ ವಿದ್ಯಾರ್ಥಿನಿಯರು ಅಸಭ್ಯವಾಗಿ ನರ್ತಿಸಿದ್ದಾರೆ ಮತ್ತು ಆಕ್ಷೇಪಾರ್ಹ ಸನ್ನೆಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಹರಿಯಾಣದ ಸಂಸ್ಕೃತಿ ಮತ್ತು ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದಿದೆ ಎಂದು ಸಂಘ-ಸಂಸ್ಥೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ, ಹಾಡಿನ ಸಾಹಿತ್ಯವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ಕಾನೂನು ಕ್ರಮದ ಭೀತಿ ಮತ್ತು ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಬಾದ್‌ಶಾ, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. “ನಾನು ಹರಿಯಾಣದ ಮಣ್ಣಿನ ಮಗ. ಅಲ್ಲಿನ ಮಹಿಳೆಯರು ಅಥವಾ ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಉದ್ದೇಶ ನನಗಿಲ್ಲ. ಕೇವಲ ಹಿಪ್-ಹಾಪ್ ಪೈಪೋಟಿಯ ದೃಷ್ಟಿಯಿಂದ ಈ ಸಾಹಿತ್ಯ ಬರೆಯಲಾಗಿತ್ತು. ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ,” ಎಂದು ಅವರು ಮನವಿ ಮಾಡಿದ್ದಾರೆ.

ವಿವಾದಕ್ಕೆ ಪೂರ್ಣವಿರಾಮ ಇಡುವ ನಿಟ್ಟಿನಲ್ಲಿ, ಬಾದ್‌ಶಾ ಅವರು ‘ಟಟೀರಿ’ ಹಾಡನ್ನು ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕುವುದಾಗಿ ಘೋಷಿಸಿದ್ದಾರೆ. ಯೂಟ್ಯೂಬ್ ಮತ್ತು ಸ್ಪಾಟಿಫೈ ಸೇರಿದಂತೆ ಎಲ್ಲಾ ಪ್ರಮುಖ ತಾಣಗಳಿಂದ ಈ ಹಾಡನ್ನು ಡಿಲೀಟ್ ಮಾಡಲಾಗುತ್ತಿದೆ. ಸಾರ್ವಜನಿಕ ಭಾವನೆಗಳಿಗೆ ಗೌರವ ನೀಡಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Must Read