ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ಹೊರಟಿದ್ದೀರಾ?: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಡಿಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಉನ್ನತ ಪೊಲೀಸ್ ಅಧಿಕಾರಿಗಳನ್ನು (Police Officials) ತರಾಟೆಗೆ ತೆಗೆದುಕೊಂಡ ವಿದ್ಯಮಾನ ಮಂಗಳವಾರ ನಡೆಯಿತು.

ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕುತ್ತೀರಿ ಅಂದರೆ ಹೇಗೆ? ಈ‌ ಸಭೆಗೂ ಕೇಸರಿ ಶಾಲು ಹಾಕಿಕೊಂಡ ಬರಬೇಕಾಗಿತ್ತು. ನಮ್ಮ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ನಾವು ಬಿಡುವುದಿಲ್ಲ ಎಂದರು.

ದೇಶದ ಬಗ್ಗೆ ಗೌರವ ಇದ್ರೆ ರಾಷ್ಟ್ರ ಧ್ವಜ ಹಾಕೊಂಡು ಕೆಲಸ ಮಾಡಬೇಕಿತ್ತು. ನಮ್ಮ ಸರಕಾರದಲ್ಲಿ ಪೊಲೀಸ್ ಇಲಾಖೆಯನ್ನ ಕೇಸರಿಕರಣ ಮಾಡಲು ನಾವು ಬಿಡೊಲ್ಲ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತರಾಟೆಗೆ ತೆಗೆದುಕೊಂಡರು.

PSI ಅಕ್ರಮದಲ್ಲಿ ಒಬ್ಬ ಎಡಿಜಿಪಿ ಓಎಂಆರ್ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ ನೋಡಿ. ಪ್ರೆಸ್ ಕಾನ್ಫರೆನ್ಸ್ ಮಾಡಿ ಪ್ರಕರಣ ಬಯಲಿಗೆ ತಂದವರನ್ನೇ ಹರಾಸ್ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿತ್ತು. ಆ ಗೌರವ, ಘನತೆಯನ್ನು ಹಾಳು‌ ಮಾಡಿದ್ದೀರ ನೀವು. ಎಲ್ಲಿ ನೋಡಿದ್ರು ಬರೀ ಕಾಸು, ಕಾಸು, ಕಾಸು. ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು. ಜನ ಈ ಸರಕಾರದಿಂದ ಬಹುದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಿದ್ದಾರೆ. ಅದು ಪೊಲೀಸ್ ಇಲಾಖೆಯಿಂದಲೇ ಶುರು ಆಗಬೇಕು. ಈ ಸರಕಾರದಿಂದ ಬದಲಾವಣೆ ಸಂದೇಶ ಜನರಿಗೆ ಹೋಗಬೇಕು ಎಂಬುದಾಗಿ ಎಚ್ಚರಿಕೆ ನೀಡಿದರು.

ನಿಮ್ಮಿಂದ ನಮಗೆ ನಯಾಪೈಸೆ ಹಣ ಬೇಕಿಲ್ಲ. ನೀವು ಯಾರಿಗೂ ಹಣ ಕೊಡೋದು ಬೇಡ. ಜನ ನರಳದಂತೆ ಉತ್ತಮವಾಗಿ ಕೆಲಸ ಮಾಡಿದ್ರೆ ಸಾಕು. ನಿಮ್ಮ ಹಿಂದಿನ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯೊಲ್ಲ. ಹಿಂದೆ ಪೇ ಸಿಎಂ ಅಭಿಯಾನ ಮಾಡಿದಾಗ ನನ್ನ ಮತ್ತು ಸಿದ್ದರಾಮಯ್ಯರ ಜೊತೆ ಹೇಗೆ ನಡೆದುಕೊಂಡಿದ್ದೀರಾ ಗೊತ್ತಿದೆ. ನಮ್ಮ ಮೇಲೆ ಕೇಸ್ ಹಾಕಿದ್ರಿ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು, ಸುಳ್ಳು ಸಾವಿರಾರು ಕೇಸ್ ಹಾಕಿದ್ರಿ. ಅವರನ್ನು ಹರಾಸ್ ಮಾಡಿದ್ರಿ. ನಮ್ಮನ್ನೇ, ಸಿದ್ದರಾಮಯ್ಯ ಅವರನ್ನೇ ಬಿಡದ ನೀವು ಇನ್ನು ಸಾಮಾನ್ಯ ಜನರನ್ನು ಬಿಡ್ತೀರಾ? ಆದರೆ ಎದುರು ಪಾರ್ಟಿ ವಿರುದ್ಧ ಮಾತ್ರ ಯಾವುದೇ ಕೇಸ್ ಹಾಕಲಿಲ್ಲ. ಅವರ ಜತೆ ಶಾಮೀಲಾಗಿ ಕುಣಿದ್ರಿ .ಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ‌ಏನಾಯ್ತು ಗೊತ್ತಿದೆ. ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು ಅಂದರೂ ಅವರ ಮೇಲೆ ಕೇಸ್ ಹಾಕಿಲ್ಲ ನೀವು. ಅಷ್ಟು ದೊಡ್ಡ ಪ್ರಕರಣ ಆದರೂ ಕೇಸ್ ಹಾಕದೇ ನಮ್ಮ ವಿರುದ್ಧ ನಡೆದುಕೊಂಡಿದ್ದಿರಿ. ಇವೆಲ್ಲ ನಮ್ಮ ಸರ್ಕಾರದಲ್ಲಿ ನಡೆಯಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಾವು ನಿಮ್ಮ ಜೊತೆ ಇರುತ್ತೇವೆ. ಈ ಸರ್ಕಾರದ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ, ಅದನ್ನ ಉಳಿಸಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ಡಿಕೆಶಿ ಸೂಚನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!