September 30, 2026
Wednesday, September 30, 2026
spot_img

ನೀವು ತಿರುಪತಿಗೆ ಹೊರಟಿದ್ದೀರಾ? ಟೋಕನ್ ಪಡೆಯುವ ಮುನ್ನ ಈ ಪ್ರಮುಖ ಸುದ್ದಿ ಓದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳುವ ಯಾತ್ರಿಕರು ಈ ಪ್ರಮುಖ ಬದಲಾವಣೆಯನ್ನು ಗಮನಿಸಬೇಕು. ತಿರುಮಲದಲ್ಲಿ ಅನೂಹ್ಯವಾಗಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ, ತಿರುಮಲ ತಿರುಪತಿ ದೇವಸ್ಥಾನಂ (TTD) ಬುಧವಾರ ನೀಡಲಾಗುತ್ತಿದ್ದ ‘ಸ್ಲಾಟೆಡ್ ಸರ್ವ ದರ್ಶನ’ (SSD) ಟೋಕನ್‌ಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಟೋಕನ್ ವಿತರಣೆಯ ಹೊಸ ವೇಳಾಪಟ್ಟಿ

ಸಾಮಾನ್ಯವಾಗಿ ಶ್ರೀನಿವಾಸಂ, ವಿಷ್ಣು ನಿವಾಸಂ ಹಾಗೂ ಭೂದೇವಿ ಕೌಂಟರ್‌ಗಳಲ್ಲಿ ಮರುದಿನದ ದರ್ಶನಕ್ಕೆ ಹಿಂದಿನ ದಿನವೇ ಟೋಕನ್ ನೀಡಲಾಗುತ್ತದೆ. ಆದರೆ, ಪ್ರಸ್ತುತ ದಟ್ಟಣೆಯಿಂದಾಗಿ ಗುರುವಾರಕ್ಕಾಗಿ ನೀಡಬೇಕಿದ್ದ ಬುಧವಾರದ ಟೋಕನ್ ನೀಡಲಾಗಿಲ್ಲ. ಶುಕ್ರವಾರದ ಸ್ವಾಮಿ ದರ್ಶನಕ್ಕೆ ಬಯಸುವ ಭಕ್ತರಿಗೆ ಗುರುವಾರ ಮಧ್ಯಾಹ್ನದಿಂದ ಮತ್ತೆ ಟೋಕನ್ ಲಭ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ.

ಸರತಿಯಲ್ಲಿದೆ ಗಂಟೆಗಟ್ಟಲೆ ಕಾಯುವಿಕೆ

ಸಾಮಾನ್ಯವಾಗಿ ಜುಲೈನಲ್ಲಿ ಮಳೆ ಮತ್ತು ಶೈಕ್ಷಣಿಕ ವರ್ಷ ಆರಂಭವಾಗುವುದರಿಂದ ಜನಸಂದಣಿ ವಿರಳವಾಗಿರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಸಾಮಾನ್ಯ ದರ್ಶನಕ್ಕೆ ಸುಮಾರು 12 ರಿಂದ 24 ಗಂಟೆ ಬೇಕಾಗುತ್ತಿದೆ. ವೈಕುಂಠಂ ಮತ್ತು ನಾರಾಯಣಗಿರಿ ಕಾಂಪ್ಲೆಕ್ಸ್‌ಗಳು ಸಂಪೂರ್ಣ ಭರ್ತಿಯಾಗಿವೆ. ಮಂಗಳವಾರ ಕೇವಲ ಒಂದು ಗಂಟೆಯಲ್ಲೇ ಎಲ್ಲಾ ಟೋಕನ್‌ಗಳು ಖಾಲಿಯಾದ್ದರಿಂದ, ದೂರದೂರುಗಳ ಭಕ್ತರು ಪರದಾಡುವಂತಾಯಿತು. ಸತತ ನಾಲ್ಕನೇ ವಾರವೂ ಈ ರೀತಿ ವಿತರಣೆ ತಡೆಯುವ ಸ್ಥಿತಿ ನಿರ್ಮಾಣವಾಗಿದೆ.

Must Read