Friday, March 24, 2023

Latest Posts

ನೀವು ಚಾಟ್‌ಜಿಪಿಟಿ ಬಳಸುತ್ತಿದ್ದೀರಾ? ಹಾಗಿದ್ರೆ ಈ ವಿಷಯದ ಬಗ್ಗೆ ಎಚ್ಚರದಿಂದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೈಕ್ರೋಸಾಫ್ಟ್‌ ಬೆಂಬಲಿತ ʼಚಾಟ್‌ಜಿಪಿಟಿʼ ಈಗ ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಓಪನ್‌ ಏಐ (OpenAI) ನಿಂದ ನಿರ್ಮಾಣಗೊಂಡ ಕೃತಕ ಬುದ್ಧಿಮತ್ತೆಯ ಈ ಚಾಟ್‌ ಬೋಟ್‌ ಅನ್ನು ವಿಶ್ವದಾದ್ಯಂತ ಜನರು ನೆಚ್ಚಿಕೊಳ್ಳುತ್ತಿದ್ದಾರೆ. ಕೇವಲ ಮೂರು ತಿಂಗಳಲ್ಲಿ 100 ಮಿಲಿಯನ್‌ ಗೂ ಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ದಾಖಲೆ ಸೃಷ್ಟಿಸಿದೆ. ಆದರೆ ಇದೀಗ ಚಾಟ್‌ಜಿಪಿಟಿ ಹೆಸರಲ್ಲಿ ಅಂತರ್ಜಾಲ ಖದೀಮರು ಬಳಕೆದಾರರ ವೈಯುಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ ಎಂದು ವರದಿಗಳಾಗಿವೆ.

ಇತ್ತೀಚೆಗೆ ಅಂತರ್ಜಾಲ ಭದ್ರತೆಯನ್ನು ಒದಗಿಸುವ ಕ್ಯಾಸ್ಪರ್ಸ್ಕಿ ಸಂಶೋಧಕರು ಹೊಸ ಮಾಲ್ವೇರ್ ಅನ್ನು ಒಳಗೊಂಡಿರುವ ಮೋಸದ ChatGPT ಡೆಸ್ಕ್ಟಾಪ್ ಅಪ್ಲಿಕೇಶನ್ ಅನ್ನು ಪತ್ತೆ ಹಚ್ಚಿದ್ದಾರೆ, ಇದು ಬಳಕೆದಾರರ ಸಾಮಾಜಿಕ ಮಾಧ್ಯಮ ಲಾಗಿನ್ ಮಾಹಿತಿಯನ್ನು ಕದಿಯುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಈ ಕುರಿತು ಕ್ಯಾಸ್ಪರ್ಸ್ಕಿ ಬ್ಲಾಗ್‌ ಪೋಸ್ಟ್‌ ಒಂದನ್ನು ಮಾಡಿದ್ದು ನಕಲಿ ಅಪ್ಲಿಕೇಶನ್‌ನ ಲಿಂಕ್‌ಗಳು ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿವೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳ ಮೂಲಕ 50 ಡಾಲರ್‌ ಕ್ರೆಡಿಟ್‌ ನೀಡುವ ಆಮಿಷ ತೋರಿಸಿ ಮೋಸದ ಅಪ್ಲಿಕೇಷನ್‌ ಡೌನ್‌ಲೋಡ್ ಮಾಡಲು ಬಳಕೆದಾರರನ್ನು ಒತ್ತಾಯಿಸುತ್ತಿದ್ದು ಅವರು ಡೌನ್‌ಲೋಡ್ ಮಾಡಿದ ತಕ್ಷಣ ಮಾಲ್ವೇರ್‌ ಅನ್ನು ಅಲ್ಲಿ ಸ್ಥಾಪಿಸಲಾಗುತ್ತದೆ. ಆ ಮೂಲಕ ಬಳಕೆದಾರರ ಸೋಷಿಯಲ್‌ ಮೀಡಿಯಾ ಲಾಗಿನ್‌ ಮಾಹಿತಿಗಳನ್ನು ಕದಿಯುತ್ತಿದ್ದಾರೆ ಎಂದು ವಿವರಿಸಿದೆ.

ಕ್ಯಾಸ್ಪರ್ಸ್ಕಿ ಹೊಸ ಮಾಲ್‌ವೇರ್‌ಗೆ Fobo (Trojan-PSW.Win64.Fobo) ಎಂದು ಹೆಸರಿಸಿದೆ. ಮೋಸದ ಚಾಟ್‌ಜಿಪಿಟಿ ಸೈಟ್ ಅನ್ನು ಸ್ಕ್ಯಾಮರ್‌ಗಳು ನಿರ್ಮಿಸಿದ್ದಾರೆ ಎಂದು ಸೈಬರ್‌ಸೆಕ್ಯುರಿಟಿ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಹಾಗಾಗಿ ಚಾಟ್‌ಜಿಪಿಟಿ ಬಳಕೆದಾರರು ಈ ರೀತಿಯ ಮೋಸದ ಜಾಲಗಳಿಂದ ಎಚ್ಚರದಿಂದಿರುವಂತೆ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!