ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿವಿಯ ಕೇಳುವ ಶಕ್ತಿ ಕಡಿಮೆಯಾದರೆ ಅದು ದೇಹದ ಸಮತೋಲನ, ನಡೆಯುವ ವೇಗ, ನಿತ್ಯದ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆಯೇ?
ಹೌದು ಎನ್ನುತ್ತಾರೆ ವೈದ್ಯರು.
ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚು ಕಂಡುಬರುತ್ತಿದ್ದು, ಹಲವರು ಕಾರಣವೇ ತಿಳಿಯದೆ ನಡೆಯುವಾಗ ತಡಕಾಡುವುದು, ಬ್ಯಾಲೆನ್ಸ್ ಕಳೆದುಕೊಳ್ಳುವುದು ಅಥವಾ ಆಗಾಗ ಕೆಳಗೆ ಬೀಳುವಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಕಿವಿಗೂ, ಸಮತೋಲನಕ್ಕೂ ಏನು ಸಂಬಂಧ?
ನಮ್ಮ ಕಿವಿಯ ಒಳಭಾಗದಲ್ಲಿ ಶಬ್ದ ಕೇಳಿಸುವ ವ್ಯವಸ್ಥೆಯಷ್ಟೇ ಅಲ್ಲ, ದೇಹದ ಸಮತೋಲನ ಕಾಪಾಡುವ ವಿಶೇಷ ವ್ಯವಸ್ಥೆಯೂ ಇರುತ್ತದೆ. ಇದನ್ನು ಇನ್ನರ್ ಇಯರ್ ಬ್ಯಾಲೆನ್ಸ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಏನಾದರೂ ತೊಂದರೆ ಉಂಟಾದರೆ ದೇಹದ ಚಲನೆಗಳ ಮೇಲೆ ಪರಿಣಾಮ ಬೀಳಬಹುದು. ಹೀಗಾಗಿ ಕೇಳುವ ಶಕ್ತಿ ಕಡಿಮೆಯಾದವರಲ್ಲಿ ನಡೆಯುವಾಗ ಅಸಮತೋಲನ, ತಲೆಸುತ್ತು ಹಾಗೂ ಬೀಳುವ ಅಪಾಯ ಹೆಚ್ಚಾಗಬಹುದು.
ನಿಧಾನವಾಗಿ ನಡೆಯುವುದು ಕೂಡ ಎಚ್ಚರಿಕೆಯ ಸಂಕೇತವೇ?
ಒಬ್ಬ ವ್ಯಕ್ತಿಯ ನಡೆಯುವ ವೇಗ ಆತನ ಆರೋಗ್ಯವನ್ನು ಸೂಚಿಸುತ್ತದೆ. ಹೃದಯ, ಶ್ವಾಸಕೋಶ, ನರಮಂಡಲ ಹಾಗೂ ಮೆದುಳಿನ ಕಾರ್ಯಕ್ಷಮತೆ ಚೆನ್ನಾಗಿದ್ದರೆ ವ್ಯಕ್ತಿ ಸಹಜವಾಗಿ ಚುರುಕಾಗಿ ನಡೆಯುತ್ತಾನೆ. ಆದರೆ ಕೇಳುವ ಶಕ್ತಿ ಕುಂದಿದವರಲ್ಲಿ ನಡೆಯುವ ವೇಗ ಕಡಿಮೆಯಾಗುವ ಸಾಧ್ಯತೆ ಹೆಚ್ಚು ಎಂದು ಹಲವು ಅಧ್ಯಯನಗಳು ಸೂಚಿಸಿವೆ. ಸುತ್ತಮುತ್ತಲಿನ ಪರಿಸರದ ಬಗ್ಗೆ ಮೆದುಳಿಗೆ ಕಡಿಮೆ ಮಾಹಿತಿ ಸಿಗುತ್ತದೆ. ಹೀಗಾಗಿ ದೇಹ ಹೆಚ್ಚು ಎಚ್ಚರಿಕೆಯಿಂದ ಚಲಿಸಲು ಪ್ರಯತ್ನಿಸುವುದು ಇದಕ್ಕೆ ಕಾರಣ.
ಈ ಸಮಸ್ಯೆ ತಡೆಗಟ್ಟುವುದು ಹೇಗೆ?
ತಜ್ಞರ ಪ್ರಕಾರ, ನಿಯಮಿತವಾಗಿ ಕಿವಿಯ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು, ಅಗತ್ಯವಿದ್ದರೆ ಹಿಯರಿಂಗ್ ಏಡ್ಸ್ ಬಳಸುವುದು, ಅತಿಯಾದ ಶಬ್ದ ಇರುವ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯದೇ ಇರುವುದು, ಪ್ರತಿದಿನ ವಾಕಿಂಗ್ ಅಥವಾ ದೈಹಿಕ ಚಟುವಟಿಕೆ ನಡೆಸುವುದು, ಸಮತೋಲನ ಹೆಚ್ಚಿಸುವ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಇಂತಹಾ ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದು.
ಕಿವಿ ಕೇಳಿಸದಿರುವುದು ಕೇವಲ ಶಬ್ದ ಕೇಳಿಸದಿರುವ ಸಮಸ್ಯೆ ಎಂದು ಕಡೆಗಣನೆ ಬೇಡ. ಅದು ದೇಹದ ಸಮತೋಲನದಿಂದ ಹಿಡಿದು ಮಾನಸಿಕ ಆರೋಗ್ಯದವರೆಗೂ ಪರಿಣಾಮ ಬೀರಬಹುದು. ಆದ್ದರಿಂದ ಕೇಳುವ ಶಕ್ತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.



