June 25, 2026
Thursday, June 25, 2026
spot_img

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿ ಜಪ್ತಿ: ರೈತರ ಪರವಾಗಿ ಧ್ವನಿ ಎತ್ತಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಹೊಸದಿಗಂತ ವರದಿ ಉತ್ತರ ಕನ್ನಡ:

ಯಾವುದೇ ಅಕ್ರಮವಿಲ್ಲದೆ, ಸಂಪೂರ್ಣ ಕಾನೂನುಬದ್ಧ ದಾಖಲೆಗಳೊಂದಿಗೆ ಸಾಗಿಸಲಾಗುತ್ತಿದ್ದ ಅಡಿಕೆ ತುಂಬಿದ ಲಾರಿಗಳನ್ನು ಮಹಾರಾಷ್ಟ್ರದಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯ ನೆಪದಲ್ಲಿ ವಶಪಡಿಸಿಕೊಂಡಿರುವುದು ತೀರಾ ಅಸಮಂಜಸವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಕನ್ನಡ, ಶಿವಮೊಗ್ಗ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪಾರಸ್ಥರು ಉತ್ತರ ಭಾರತಕ್ಕೆ ನಿರಂತರವಾಗಿ ಅಡಿಕೆ ಕಳುಹಿಸುತ್ತಿದ್ದಾರೆ. ಆದರೆ, ಪ್ರಸ್ತುತ ಅಧಿಕಾರಿಗಳು ಕಾನೂನನ್ನು ದುರ್ಬಳಕೆ ಮಾಡಿಕೊಂಡು, ಕೇವಲ ತಾಂತ್ರಿಕ ನೆಪ ಮತ್ತು ಶಂಕೆಯ ಆಧಾರದ ಮೇಲೆ ಮಲೆನಾಡಿನ ಅಡಿಕೆ ಲಾರಿಗಳನ್ನು ತಡೆಹಿಡಿದು ಜಪ್ತಿ ಮಾಡಿರುವುದು ಬೇಸರದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಇಂಡೋನೇಷ್ಯಾ, ಮ್ಯಾನ್ಮಾರ್‌ಗಳಿಂದ ಆಗುತ್ತಿದ್ದ ಕಳಪೆ ಅಡಿಕೆ ಕಳ್ಳಸಾಗಣೆ ತಡೆಯಲು ಮಹಾರಾಷ್ಟ್ರ ಸರ್ಕಾರ ಕೈಗೊಂಡಿದ್ದ ಕಠಿಣ ಕ್ರಮಗಳು ನಮ್ಮ ರೈತರಿಗೆ ನೆಮ್ಮದಿ ನೀಡಿದ್ದವು. ಆದರೆ, ಇದರ ಬೆನ್ನಲ್ಲೇ ಈಗ ಸ್ಥಳೀಯ ಮತ್ತು ಕಾನೂನುಬದ್ಧ ವ್ಯಾಪಾರಿಗಳ ಲಾರಿಗಳನ್ನು ತಡೆಹಿಡಿದಿರುವುದು ಸೂಕ್ತವಲ್ಲದ ಕ್ರಮವಾಗಿದ್ದು, ಇದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಅವರು ವಿಷಾದಿಸಿದ್ದಾರೆ.

ಇದನ್ನೂ ಓದಿ:

​ಈ ಗಂಭೀರ ಬಿಕ್ಕಟ್ಟಿನ ಕುರಿತು ಈಗಾಗಲೇ ಅನೇಕ ಅಡಿಕೆ ಸಂಘ-ಸಂಸ್ಥೆಗಳು ಮಾಹಿತಿ ನೀಡಿದ್ದು, ಸಮಸ್ಯೆಯನ್ನು ತಕ್ಷಣವೇ ಕೇಂದ್ರ ಮಂತ್ರಿಗಳು ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ವಿಷಯದ ಕಡೆಗೆ ತಕ್ಷಣವೇ ಗಮನಹರಿಸಿದ್ದು, ಸಮಸ್ಯೆಯನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸುವುದಾಗಿ ಸಕಾರಾತ್ಮಕ ಭರವಸೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.

​ಈ ಬಿಕ್ಕಟ್ಟು ಶೀಘ್ರದಲ್ಲೇ ಸುಖಾಂತ್ಯ ಕಾಣಲಿದ್ದು, ನಮ್ಮ ಭಾಗದ ಅಡಿಕೆ ವ್ಯಾಪಾರಸ್ಥರು ಮತ್ತು ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !