ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ: ಸಚಿವ ಆರಗ ಜ್ಞಾನೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಲಕ್ಷಾಂತರ ಜನ ರೈತರ ಬದುಕಿನ ಆಶಾಕಿರಣವಾಗಿರುವ ಅಡಕೆ ಬಳಕೆಯಿಂದ ಆರೋಗ್ಯಕ್ಕೆ ಹಾನಿಯಿಲ್ಲ; ಬದಲಿಗೆ ಅದರಿಂದಾಗುವ ಪ್ರಯೋಜನದ ಕುರಿತು ಸಂಶೋಧನೆಗಳು ನಡೆಯುತ್ತಿವೆ ಎಂದು ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಲೋಕಸಭಾ ಸದಸ್ಯರೊಬ್ಬರು ಅಡಕೆ ಹಾನಿಕಾರಕ ಹಾಗೂ ಅದನ್ನು ನಿಷೇಧ ಮಾಡಬೇಕು ಎಂದು ನೀಡಿದ್ದ ಹೇಳಿಕೆಯಿಂದ ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ ಅಡಕೆ ದೇಹಕ್ಕೆ ಹಾನಿಕಾರಕವಲ್ಲ ಹಾಗೂ ಈ ರೀತಿ ಹೇಳಿಕೆಯಿಂದಾಗಿ ಅಡಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲು ಕರ್ನಾಟಕ ರಾಜ್ಯದ ಅಡಕೆ ಟಾಸ್ಕ್ ಫೋರ್ಸ್ ನಿಯೋಗದ ವತಿಯಿಂದ ದಿಲ್ಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಲಾಗಿತ್ತು ಎಂದರು.

ಈ ಸಂಬಂಧ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ಥೋಮರ್ ಹಾಗೂ ರಾಜ್ಯ ಸಚಿವರನ್ನು ಭೇಟಿ ಮಾಡಲಾಗಿದೆ. ಅಡಕೆ ಬಗ್ಗೆ ಕೋರ್ಟ್‌ನಲ್ಲಿ ತೀರ್ಮಾನ ಆಗದೆ ಯಾವುದೇ ಹೇಳಿಕೆಗಳನ್ನು ನೀಡಬಾರದು, ಅದು ಅಡಕೆ ಬೆಳೆಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

ಇನ್ನು ಅಡಕೆ ಮನುಷ್ಯನ ದೇಹಕ್ಕೆ ಹಾನಿಕರಕ ಎಂದು ಹಿಂದಿನ ಕಾಂಗ್ರೆಸ್ ಸರಕಾರ ಸುಪ್ರೀಂ ಕೋರ್ಟ್‌ಗೆ ಒಂದು ಅಫಿಡವಿಟ್ ನೀಡಿದ್ದು, ಈ ಅಫಿಡವಿಟ್ ಅನ್ನು ತೆಗೆಯುವ ಸಲುವಾಗಿ ನಾವು ಪ್ರಯತ್ನ ಮಾಡ್ತಿದ್ದೇವೆ ಹಾಗೂ ಅಡಕೆ ಹಾನಿಕರ ಅಲ್ಲ ಎಂಬ ಬಗ್ಗೆ ನಮ್ಮ ರಾಜ್ಯದಲ್ಲಿ ಸಂಶೋಧನೆಯನ್ನು ಸಹ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ನಮ್ಮ ಟಾಸ್ಕ್ ಫೋರ್ಸ್ ಕಡೆಯಿಂದ ಸಂಶೋಧನೆ ನಡೆಯುತ್ತಿದೆ. ಕೇಂದ್ರದಿಂದಲೂ ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತಿದೆ. ಅಡಕೆ ಸೇವನೆ, ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದರ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಇದರಿಂದ ಬರುವ ನಿರೀಕ್ಷೆಯಿದೆ ಹಾಗೂ ರೈತ ಸಮುದಾಯಕ್ಕೆ ಇದರಿಂದ ಬಹಳ ದೊಡ್ಡ ಯಶಸ್ಸು ದೊರೆಯಲಿದೆ ಎಂದರು.

ನಾವು ನೀಡಿರುವ ಈ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮಗೆ ಅತ್ಯಂತ ಸಂತೋಷ ವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!