ಮೇಕೆದಾಟು ಯೋಜನೆ – ತಮಿಳುನಾಡು ಖಂಡನಾ ನಿರ್ಣಯ ಕಾನೂನುಬಾಹಿರ : ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ತಮಿಳುನಾಡು ವಿಧಾನಸಭೆಯಲ್ಲಿ ಇಂದು ಮೇಕೆದಾಟು ಯೋಜನೆ ವಿರುದ್ಧ ಕೈಗೊಳ್ಳಲಾಗಿರುವ ನಿರ್ಣಯ ಕಾನೂನು ಬಾಹಿರವಾಗಿದೆ. ಒಂದು ರಾಜ್ಯ ಇನ್ನೊಂದು ರಾಜ್ಯದ ಹಕ್ಕನ್ನು ಆಕ್ರಮಿಸಿಕೊಳ್ಳುವಂತಹ ಜನ ವಿರೋಧಿ ನಿರ್ಣಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ನಂಬಿಕೆ ಇಲ್ಲದ ನಿರ್ಣಯ ಇದಾಗಿದೆ. ಈ ನಿರ್ಣಯವನ್ನು ಸಮಸ್ತ ಕರ್ನಾಟಕದ ಜನತೆ ಹಾಗೂ ಸರಕಾರ ತೀವ್ರವಾಗಿ ಖಂಡಿಸುತ್ತದೆ. ಮೇಕೆದಾಟು ಯೋಜನೆ ಜಾರಿಗೆ ನಮ್ಮ ನಿರ್ಧಾರ ಅಚಲವಾಗಿದೆ ಎಂದಿದ್ದಾರೆ.

ಮೇಕೆದಾಟು ಯೋಜನೆ ರಾಜ್ಯದಲ್ಲಿ ಹುಟ್ಟುವ ಕಾವೇರಿ ನದಿಗೆ ಸಂಬಂಧಿಸಿದ್ದಾಗಿದೆ. ಕಾವೇರಿ ನ್ಯಾಯಾಧೀಕರಣ ಅನ್ವಯ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಕೊಟ್ಟ ನಂತರ ಉಳಿದ ನೀರಿನ ಮೇಲೆ ಕರ್ನಾಟಕದ ಹಕ್ಕು ಇದೆ. ತಮಿಳುನಾಡಿನ ಈ ರಾಜಕೀಯ ನಿರ್ಧಾರವನ್ನು ಲೆಕ್ಕಿಸದೆ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಕರ್ನಾಟಕ ಸರಕಾರ ರಾಮನಗರ ಜಿಲ್ಲೆ ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣ ಮಾಡಲು ರೂಪಿಸಿರುವ ಯೋಜನೆಗೆ ನಿರಂತರವಾಗಿ ವಿರೋಧ ಮಾಡುತ್ತಿರುವ ತಮಿಳುನಾಡು ಸರಕಾರ ಇಂದು ಅಲ್ಲಿನ ವಿಧಾನಸಭೆಯಲ್ಲಿ ಮೇಕೆದಾಟು ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವ ಕರ್ನಾಟಕ ಸರಕಾರದ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!