ಕನ್ನಡ ಪರೀಕ್ಷೆಯಲ್ಲಿ ಕನ್ನಡ ಭಾಷೆಗಿಂತ ಹಿಂದಿ ಭಾಷೆಯೇ ಹೆಚ್ಚು: ಕರ್ನಾಟಕ ನವ ನಿರ್ಮಾಣ ವೇದಿಕೆ ಪ್ರತಿಭಟನೆ

ಹೊಸದಿಗಂತ ವರದಿ, ಹುಬ್ಬಳ್ಳಿ:

ರಾಷ್ಟ್ರೀಯ ಪರೀಕ್ಷೆ ಸಂಸ್ಥೆ ನಡೆಸಿದ ಯು.ಜಿ.ಸಿ ಎನ್.ಇ.ಟಿ ಕನ್ನಡದ ಐಚ್ಛಿಕ ಭಾಷೆಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಭಾಷೆಗಿಂತ ಶೇ 90 ರಷ್ಟು ಹಿಂದಿ ಭಾಷೆ ಇರುವುದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ವೇದಿಕೆ ಸೋಮವಾರ ಮಿನಿವಿಧಾನಸೌಧ ಎದುರಿಗೆ ಪ್ರತಿಭಟನೆ ಮಾಡಿ ನಂತರ ತಹಶಿಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿತು.
ಕೇಂದ್ರ ಸರ್ಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಕನ್ನಡದವರಿಗೆ ಇರುವ ಅವಕಾಶಗಳನ್ನು ಈ ರೀತಿಯ ಕುತಂತ್ರದಿಂದ ಸ್ಥಗಿತಮಾಡುವುದಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಮೊನ್ನೆ ರಾಷ್ಟ್ರೀಯ ಪರೀಕ್ಷೆ ನಡೆಸಿದ ಪರೀಕ್ಷೆಯಲ್ಲಿ ಯು.ಜಿ.ಸಿ,ಎನ್.ಇ.ಟಿ ಕನ್ನಡ ಐಚ್ಛಿಕ ಭಾಷೆಯಲ್ಲಿಯೂ ಶೇ 90 ರಷ್ಟು ಹಿಂದಿ ಭಾಷೆಯಲ್ಲಿ ಪ್ರಶ್ನೆಗಳನ್ನು ಕೊಟ್ಟಿರುವುದು ಕಂಡು ಬಂದಿದೆ. ಇದರಿಂದ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿಯೂ ಗೊಂದಲ ಉಂಟಾಗಿ ಪರೀಕ್ಷೆ ಬಹಿಷ್ಕರಿಸಿದ್ದಾರೆ. ಹಾಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕನ್ನಡದ ಮೇಲೆ ತಾತ್ಸಾರವಾಗಿದೆ ಅಲ್ಲದೇ ಇದು ಕನ್ನಡಿಗರಿಗೆ ದ್ರೋಹ ಮಾಡುವುದಕ್ಕೆ ಉದ್ದೇಶ ಪೂರ್ವಕವಾಗಿ ಇಂಥಹ ಕೃತ್ಯಗಳನ್ನು ಸಂಸ್ಥೆ ಮಾಡಿದೆ ಎಂದು ಆರೋಪಿಸಿದರು.
ಇನ್ನೂ ಕನ್ನಡಿಗರ ಮೇಲೆ ಒಂದಿಲ್ಲ ಒಂದು ಅನ್ಯಾಯ ನಡೆಯುತ್ತಿದ್ದು, ಈ ದಿಸೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಪರೀಕ್ಷೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಎರಡು ವರ್ಷದಿಂದ ಪರೀಕ್ಷೆ ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಈರಣ್ಣಾ ಎಮ್ಮಿ, ಆನಂದ ದಲಬಂಜನ, ಸಿದ್ದು ಹಿರೇಮಠ, ಬಸವರಾಜ ಶಿವಶಿಂಪರ, ಸತೀಶ್, ಮಂಜುನಾಥ ಕಮಥರ ಸೇರಿದಂತೆ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!