November 20, 2026
Friday, November 20, 2026
spot_img

ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು: ದಿಗ್ಗಜ ಆರಂಭಿಕರಿಗೂ ಸಾಧ್ಯವಾಗದ ದಾಖಲೆ ಕನ್ನಡಿಗನ ಪಾಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಆರಂಭಿಕ ಬ್ಯಾಟರ್‌ಗಳು ಮೂಡಿಬಂದಿದ್ದಾರೆ. ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಮುರಳಿ ವಿಜಯ್ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರು ತಂಡಕ್ಕೆ ಹಲವು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಆದರೆ, ಈ ಮಹಾನ್ ಆಟಗಾರರಿಗೂ ಸವಾಲಾಗಿದ್ದ ಅಪರೂಪದ ಸಾಧನೆಯೊಂದನ್ನು ಕನ್ನಡಿಗ ಕೆ.ಎಲ್. ರಾಹುಲ್ ಈಗ ತಮ್ಮದಾಗಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಎಲ್ಲಾ ನಾಲ್ಕು SENA ದೇಶಗಳಲ್ಲಿ (ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ) 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಹಾಗೂ ಏಕೈಕ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

2026ರ ನವೆಂಬರ್ 20ರಂದು ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ರಾಹುಲ್ ಈ ವಿಶೇಷ ಮೈಲಿಗಲ್ಲನ್ನು ತಲುಪಿದರು. ನ್ಯೂಝಿಲೆಂಡ್ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ರಾಹುಲ್, ವೇಗದ ಬೌಲರ್‌ಗಳ ಸವಾಲನ್ನು ದಿಟ್ಟವಾಗಿ ಎದುರಿಸಿದರು. ಯಶಸ್ವಿ ಜೈಸ್ವಾಲ್ (85 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 130 ರನ್‌ಗಳ ಉತ್ತಮ ಜೊತೆಯಾಟವಾಡಿದ ರಾಹುಲ್, ಅತ್ಯಂತ ತಾಳ್ಮೆ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ 116 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿ ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿ ಭದ್ರವಾಗಿ ನಿಂತರು.

2014ರಲ್ಲಿ ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗಿನಿಂದ ಕೆ.ಎಲ್. ರಾಹುಲ್ ವಿದೇಶಿ ನೆಲದಲ್ಲಿ ಮಿಂಚುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ 4 ಶತಕ ಮತ್ತು 3 ಅರ್ಧಶತಕಗಳೊಂದಿಗೆ 7 ಬಾರಿ, ಆಸ್ಟ್ರೇಲಿಯಾದಲ್ಲಿ 1 ಶತಕ ಮತ್ತು 2 ಅರ್ಧಶತಕಗಳೊಂದಿಗೆ 3 ಬಾರಿ, ಸೌತ್ ಆಫ್ರಿಕಾದಲ್ಲಿ ಶತಕ ಮತ್ತು ಅರ್ಧಶತಕ ಸೇರಿದಂತೆ 2 ಬಾರಿ ಹಾಗೂ ಇದೀಗ ನ್ಯೂಝಿಲೆಂಡ್‌ನಲ್ಲಿ ಅಜೇಯ 52 ರನ್ ಗಳಿಸುವ ಮೂಲಕ ಒಟ್ಟು 13 ಬಾರಿ 50+ ಸ್ಕೋರ್ ದಾಖಲಿಸಿದ್ದಾರೆ. ಕಠಿಣ ವಿದೇಶಿ ಪಿಚ್‌ಗಳಲ್ಲಿ ತೋರಿದ ಈ ಸ್ಥಿರತೆಯೇ ಕನ್ನಡಿಗನನ್ನು ವಿಶೇಷ ಸ್ಥಾನದಲ್ಲಿ ನಿಲ್ಲಿಸಿದೆ.

ಈಗಾಗಲೇ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿರುವ ರಾಹುಲ್, ವೆಲ್ಲಿಂಗ್ಟನ್ ಟೆಸ್ಟ್‌ನ ಮೂರನೇ ದಿನದಂದು ನ್ಯೂಝಿಲೆಂಡ್ ನೆಲದಲ್ಲೂ ಶತಕ ಬಾರಿಸುವ ಅವಕಾಶ ಹೊಂದಿದ್ದಾರೆ.

Must Read

Skip to toolbar