ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸೋಮವಾರ ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ನ್ಯಾಯಮೂರ್ತಿ ಖನ್ನಾ ಅವರು 51 ನೇ ಸಿಜೆಐ ಆಗಿದ್ದು, ಸುಮಾರು 6 ತಿಂಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.
ಸುಪ್ರೀಂ ಕೋರ್ಟ್ ನ ಹಾಲಿ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಖನ್ನಾ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಕಳೆದ ತಿಂಗಳು ಶಿಫಾರಸ್ಸು ಮಾಡಿದ ನಂತರ ಅಕ್ಟೋಬರ್ 24 ರಂದು ಕೇಂದ್ರ ಸರ್ಕಾರ ಅವರನ್ನು ಅತ್ಯುನ್ನತ ನ್ಯಾಯಾಂಗ ಕಚೇರಿಗೆ ನೇಮಕ ಮಾಡಿತ್ತು.
ನವೆಂಬರ್ 11 ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ನೇಮಿಸಲು ರಾಷ್ಟ್ರಪತಿಗಳು ಸಂತೋಷಪಟ್ಟಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹುದ್ದೆ ಹೊಂದಿದ್ದು, ಪ್ರಸ್ತುತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ ಮತ್ತು ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಸಲಹೆಗಾರರ ಸದಸ್ಯರಾಗಿದ್ದಾರೆ. ಈ ಹಿಂದೆ ಜನವರಿ 2019 ರವರೆಗೆ ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶರಾಗಿ ದೆಹಲಿ ಜುಡಿಶಿಯಲ್ ಅಕಾಡೆಮಿ, ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳ ಅಧ್ಯಕ್ಷ, ನ್ಯಾಯಾಧೀಶ ಹುದ್ದೆಯನ್ನು ಹೊಂದಿದ್ದರು.
ಮೇ 1960 ರಲ್ಲಿ ಜನಿಸಿದ ಅವರು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಕಾನೂನು ಕೇಂದ್ರದಿಂದ ಕಾನೂನು ಪದವಿ ಪಡೆದಿದ್ದಾರೆ. 1983 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ನೋಂದಣಿಯಾಗಿದ್ದು, ಪ್ರಾಥಮಿಕವಾಗಿ ದೆಹಲಿ ಹೈಕೋರ್ಟ್‌ನಲ್ಲಿ ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಕಾನೂನು, ಪರಿಸರ ಕಾನೂನು, ವೈದ್ಯಕೀಯ ನಿರ್ಲಕ್ಷ್ಯ ಕಾನೂನು ಮತ್ತು ಕಂಪನಿ ಕಾನೂನನ್ನು ಅಭ್ಯಾಸ ಮಾಡಿದ್ದಾರೆ. ಸುಧೀರ್ಘ ಕಾಲ ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ವಕೀಲರಾಗಿ ಕಾರ್ಯನಿರ್ವಹಿಸಿದ್ದಾರೆ. 2004 ರಲ್ಲಿ ದೆಹಲಿ ಸರ್ಕಾರದ ಸ್ಥಾಯಿ ಸಲಹೆಗಾರರಾಗಿ (ಸಿವಿಲ್) ನೇಮಕಗೊಂಡಿದ್ದ ಅವರು, ದೆಹಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮತ್ತು ಅಮಿಕಸ್ ಕ್ಯೂರಿ (ನ್ಯಾಯಾಲಯದ ಸ್ನೇಹಿತ) ಆಗಿ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಹಾಜರಾಗಿ, ವಾದಿಸಿದ್ದಾರೆ.