ಪಾಕ್‌ ವೇಗಿ ಶಾಹಿನ್‌ ಅಫ್ರಿದಿ IPL ನಲ್ಲಿ ಎಷ್ಟು ಬೆಲೆ ಪಡೆಯುತ್ತಿದ್ದರು? ಅಚ್ಚರಿಯ ಉತ್ತರ ನೀಡಿದ ಸ್ಪಿನ್ನರ್ ಅಶ್ವಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ವರ್ಷ ನಡೆದಿದ್ದ ಟಿ 20 ವಿಶ್ವಕಪ್‌ ನಲ್ಲಿ ಪಾಕ್‌ ತಂಡವು ಟೀಂ ಇಂಡಿಯಾವನ್ನು ಸೋಲಿಸಿತ್ತು. ಪಾಕ್‌ ತಂಡದ ಈ ಗೆಲುವಿನಲ್ಲಿ ಎಡಗೈ ವೇಗಿ ಶಾಹಿನ್‌ ಶಾ ಅಫ್ರಿದಿ ಪ್ರಮುಖ ಪಾತ್ರವಹಿಸಿದ್ದರು. ಪ್ರಸ್ತುತ ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ನಲ್ಲಿ ಭಾರತ ಪಾಕ್‌ ತಂಡವನ್ನು ಮಣಿಸುವ ಮೂಲಕ ಈ ಹಿಂದೆ ತನಗೆ ಎದುರಾಗಿದ್ದ ಸೋಲಿಗೆ ಭರ್ಜರಿಯಾಗಿ ತಿರುಗೇಟು ನೀಡಿದೆ. ಭಾರತ ಇದೀಗ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದೆ. ಪಾಕಿಸ್ತಾನ ಭವಿಷ್ಯ ಇಂದು ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ನಿರ್ಣಯವಾಗಲಿದೆ. ಈ ನಡುವೆ ಐಪಿಎಲ್‌ ನಲ್ಲಿ ಪಾಕ್‌ ಆಟಗಾರನೊಬ್ಬ ಇದ್ದಿದ್ದರೆ ಎಷ್ಟು ಮೊತ್ತದ ಹಣವನ್ನು ಪಡೆಯುತ್ತಿದ್ದ ಎಂಬ ಚರ್ಚೆಯೊಂದು ಮುನ್ನೆಲೆಗೆ ಬಂದಿದೆ. 2008ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗರಿಗೆ ಐಪಿಎಲ್‌ ನಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿತ್ತು. ಆದರೆ ಮುಂಬೈ ದಾಳಿಯ ಬಳಿಕ ಎರಡೂ ರಾಷ್ಟ್ರಗಳ ನಡುವೆ ರಾಜಕೀಯ ಉದ್ವಿಗ್ನತೆಗಳು ಉದ್ಭವಿಸಿದ ಬಳಿಕ ಅವರನ್ನು ನಿರ್ಬಂಧಿಸಲಾಗಿದೆ. ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡುತ್ತಿದ್ದಾಗ ಪಾಕ್‌ ವೇಗಿ ಅಫ್ರಿದಿ ಹರಾಜಿನಲ್ಲಿ ಪಡೆಯುತ್ತಿದ್ದ ಮೊತ್ತದ ಬಗ್ಗೆ ಪ್ರಶ್ನೆ ಕೇಳಿಬಂದಿದೆ. ಈ ಬಗ್ಗೆ ಅಶ್ವಿನ್‌ ನೀಡಿರುವ ಉತ್ತರವೂ ಕುತೂಹಲಕಾರಿಯಾಗಿದೆ.
“ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ ಅವರು ಐಪಿಎಲ್‌ನಲ್ಲಿ ಆಡುತ್ತಿದ್ದರೆ ಯಾವ ಮಟ್ಟದ ಕೇಜ್‌ ಹುಟ್ಟಿಸಿರುತ್ತಿದ್ದರು ಎಂಬ ವಿಚಾರವನ್ನು ನಾನು ಸಾಕಷ್ಟು ಯೋಚಿಸಿದ್ದೇನೆ. ಹೊಸ ಚೆಂಡಿನೊಂದಿಗೆ ಸ್ವಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವ ಅಫ್ರಿದಿ, ಡೆತ್‌ ಓವರ್‌ ಗಳಲ್ಲಿ ಮೊನಚಾದ ಯಾರ್ಕರ್‌ಗಳ ಮೂಲಕ ಬ್ಯಾಟ್ಸ್‌ ಮನ್‌ ಗಳನ್ನು ಕಂಗೆಡಿಸಬಲ್ಲರು. ಅವರು ಐಪಿಎಲ್ ಹರಾಜಿನಲ್ಲಿ ಇದ್ದಿದ್ದರೆ 14 ರಿಂದ 15 ಕೋಟಿಗೆ ಹರಾಜಾಗುತ್ತಿದ್ದರು” ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಫ್ರಿದಿ ದೊಡ್ಡ ಮೊತ್ತಕ್ಕೆ ಸೇಲ್‌ ಆಗುತ್ತಿದ್ದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮತ್ತಷ್ಟು ಮಾತನಾಡಿರುವ ಅಶ್ವಿನ್‌, ʼಪಾಕಿಸ್ತಾನದ ಎಲ್ಲಾ ವೇಗದ ಬೌಲರ್‌ಗಳು ಸ್ಥಿರವಾಗಿ 140-145 ಕಿ.ಮೀ ವೇಗದಲ್ಲಿ ಬೌಲ್‌ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ತಂಡವು ಇಷ್ಟೊಂದು ಶ್ರೇಷ್ಠವಾದ ವೇಗದ ಬೌಲರ್‌ಗಳ ಬ್ಯಾಕಪ್ ಅನ್ನು ಹೊಂದಿದೆ ಎಂದು ನಾನು ಭಾವಿಸುವುದಿಲ್ಲ. ಪಾಕಿಸ್ತಾನವು ಬೌಲಿಂಗ್‌ ವಿಭಾಗದಲ್ಲಿ ಯಾವಾಗಲೂ ಸಾಕಷ್ಟು ಕಚ್ಚಾ ಪ್ರತಿಭೆಗಳನ್ನು ಹೊಂದಿರುವ ತಂಡವಾಗಿದೆ ಎಂದಿದ್ದಾರೆ.
ಇದೇ ವೇಳೆ ಪಾಕ್‌ ಸ್ಪಿನ್ನರ್ ಇಮಾದ್ ವಾಸಿಂರನ್ನು ಬೆಂಜ್‌ ನಲ್ಲಿ ಕೂರಿಸಿದರ ಬಗ್ಗೆ ಮಾತನಾಡಿದ ಅವರು, “ಇಮಾದ್ ವಾಸಿಮ್ ಪಾಕ್ ತಂಡದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಅವರು ಟಿ 20 ಸ್ವರೂಪದಲ್ಲಿ ಅತ್ಯತ್ತಮ ಆಟಗಾರ. ಆದರೆ ಈ ಬಾರಿ ಅವರು ಇಲ್ಲ. ಬದಲಾಗಿ ಪಾಕ್ ನಮ್ಮ ತಂಡದಲ್ಲಿರುವ ರವೀಂದ್ರ ಜಡೇಜಾ ಅವರಂತೆಯೇ ಆಡುವ ಮೊಹಮ್ಮದ್ ನವಾಜ್ ರ ಮೊರೆ ಹೋಗಿದೆ ಎಂದು ಹೇಳಿದ್ದಾರೆ.
ಅಶ್ವಿನ್ ಏಷ್ಯಾಕಪ್‌ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರೂ ಆಡುವ ಬಳಗದಲ್ಲಿ ಇನ್ನು ಕಾಣಿಸಿಕೊಂಡಿಲ್ಲ. ತಂಡವು ರವೀಂದ್ರ ಜಡೇಜಾ ಮತ್ತು ಯುಜ್ವೇಂದ್ರ ಚಹಾಲ್ ರನ್ನು ಆಡಿಸುತ್ತಿದೆ. ಕಳೆದ ಟಿ.20 ವಿಶ್ವಕಪ್ ತಂಡದಲ್ಲಿ ಸ್ಥಾನಪಡೆದಿದ್ದ ಅಶ್ವಿನ್, ಕೆಲದಿನಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಸ್ಥಾನ ಸಂಪಾದಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!