ಬಳ್ಳಾರಿ: ಅನಗತ್ಯ ಸಂಚರಿಸಿದರೇ ಕಠಿಣ ಕ್ರಮ- ಎಎಸ್ಐ ನಾಗಭೂಷಣ್ ಎಚ್ಚರಿಕೆ

ಹೊಸದಿಗಂತ ವರದಿ, ಬಳ್ಳಾರಿ:
ವಿಕೇಂಡ್ ಕರ್ಪ್ಯೂ ಜಾರಿಯಲ್ಲಿದ್ದರೂ ನಗರದ ರಾಯಲ್ ವೃತ್ತ, ಮೀನಾಕ್ಷಿ‌ ಸರ್ಕಲ್ ಸೇರಿದಂತೆ ನಾನಾ ಕಡೆ ಶನಿವಾರ ವಾಹನ ಸವಾರರು ಸಂಚರಿಸಿದ ಹಿನ್ನೆಲೆಯಲ್ಲಿ ಪೋಲಿಸರು ಬಿಸಿ ಮುಟ್ಟಿಸಿದರು.
ಒಮಿಕ್ರಾನ್, ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಕಡಿವಾಣ ಹಾಕಲು ಶುಕ್ರವಾರ ರಾತ್ರಿ10ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಈ ಕುರಿತು ಗಮನಕ್ಕಿದ್ದರೂ ವಾಹನ ಸವಾರರು ಅನಗತ್ಯವಾಗಿ ನಾನಾ ನೆಪ ಹೇಳಿಕೊಂಡು ಸಂಚರಿಸುವುದು ಸಾಮಾನ್ಯವಾಗಿ ಕಂಡು ಬಂತು.‌ ನಗರದ ಮೀನಾಕ್ಷಿ ವೃತ್ತದ ಬಳಿ ತಪಾಸಣೆ ನಿರತರಾಗಿದ್ದ ಸಂಚಾರಿ ಠಾಣೆ ಎಎಸ್ಐ ನಾಗಭೂಷಣ್ ಅವರು ಅನಗತ್ಯ ಓಡಾಟ ನಡೆಸುವವರಿಗೆ ಬಿಸಿ ಮುಟ್ಟಿಸಿದರು. ಆರೋಗ್ಯ ಸಮಸ್ಯೆ, ಸರ್ಕಾರಿ ನೌಕರರು, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಸೇವೆಯಲ್ಲಿ‌ ನಿರತರಾದವರನ್ನು ಹೊರತು ಪಡಿಸಿ ಉಳಿದವರಿಗೆ ದಂಡ ವಿಧಿಸಿ, ಬಿಸಿ ಮುಟ್ಟಿಸಿದರು.
ಕಾರ್, ಟಾಟಾ ಎಸಿ, ತ್ರಿಚಕ್ರವಾಹನ, ದ್ವಿಚಕ್ರ ವಾಹನ ಸವಾರರು ರಾಜಕೀಯ ಕೆಲ ನಾಯಕರು, ಅಧಿಕಾರಿಗಳ ಮೂಲಕ ಒತ್ತಡ ಹೇರಿ ಪಾರಾಗಲು ಯತ್ನಿಸಿದರೂ ಯಾವದಕ್ಕೂ ಜಗ್ಗದೇ ಪೊಲೀಸರು ತಮ್ಮ ಸೇವೆಯನ್ನು ಮುಂದುವರೆಸಿದರು. ವಾಹನದ ದಾಖಲೆಗಳು, ಚಾಲನಾ ಪತ್ರ, ವಿಮೆ, ಹೆಲ್ಮೆಟ್ ಇರಬೇಕು, ಮಾಸ್ಕ್ ಧರಿಸಬೇಕು ಇದರಿಂದ ನಮ್ಮಗಿಂತ ನಿಮ್ಮ ಜೀವಕ್ಕೆ ರಕ್ಷಣೆಯಾಗಿರಲಿದೆ. ಈ ಖಡಕ್ ಎಚ್ಚರಿಕೆಯಿಂದ ನಿಮಗೆ ಸದ್ಯ‌ ಬೇಜಾರ್ ಆಗ್ಬಹುದು, ಆದರೇ, ಈ ಕ್ರಮ ನಿಮ್ಮ‌ ಒಳ್ಳೆಯದಕ್ಕೆ ಎಂಬುದನ್ನು‌ ಮರಿಬೇಡಿ ಎಂದು ಎಎಸ್ಐ ನಾಗಭೂಷಣ್ ಅವರು ಸವಾರರಿಗೆ‌ ಹೇಳುತ್ತಿರುವುದು ಸಾಮಾನ್ಯವಾಗಿತ್ತು.

ಕ್ಯಾರೆ ಎನ್ನದ ಜನರು: ಹೋಟೆಲ್ ಗಳಲ್ಲಿ‌ ಪಾರ್ಸ್‌ಲ್ ಗೆ ಅಷ್ಟೇ ಅವಕಾಶ ಎಂದಿದ್ದರೂ ಬಹುತೇಕ ಹೋಟೆಲ್‌ಗಳಲ್ಲಿ‌ ಆಸನದಲ್ಲೇ ಕುಳಿತು ಆಹಾರ ಸೇವನೆ ಮಾಡುವುದು ಅಲ್ಲಲ್ಲಿ‌ ಕಂಡು‌ ಬಂತು. ಮೆಡಿಕಲ್, ಪೆಟ್ರೋಲ್ ಬಂಕ್, ಸರ್ಕಾರಿ‌ ಕಚೇರಿ, ಅಡುಗೆ ಅನಿಲ ಎಜೆನ್ಸಿ, ತರಕಾರಿ, ಹೂ, ಹಣ್ಣು ಮಾರಾಟ ಸೇರಿ‌ ಇತರೇ ಅಗತ್ಯ ಸೇವೆಗಳನ್ನು ಹೊರತು ಉಳಿದವುಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೇ, ಕೆಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಮಧ್ಯ‌ ವ್ಯಾಪಾರ ನಗರದ ನಾನಾ ಕಡೆ ಕದ್ದು ಮುಚ್ಚಿ ನಡೆದಿರುವುದು ಕಂಡು ಬಂತು.

ಖಾಲಿ ಖಾಲಿ: ನಗರದ ಎಪಿಎಂಸಿ ಮಾರುಕಟ್ಟೆ, ಸಾರಿಗೆ ಬಸ್ ನಿಲ್ದಾಣ, ಬೆಂಗಳೂರು ರಸ್ತೆ, ಜನರಿಲ್ಲದೇ ಬಿಕೋ ಎನ್ನುತ್ತಿರುವ ದೃಶ್ಯ ಕಂಡು ಬಂತು. ಸದಾ ವಾಹನಗಳಿಂದ‌ ತುಂಬಿ ತುಳುಕುತ್ತಿದ್ದ ಬೆಂಗಳೂರು ರಸ್ತೆ ಸಂಪೂರ್ಣ ಬಿಕೋ ಎನ್ನುತ್ತಿತ್ತು. ಗ್ರಾಮೀಣ, ನಗರ ಪ್ರದೇಶದ ಜನರು ಮನೆಯಿಂದ ಹೊರ‌ ಬಾರದ ಹಿನ್ನೆಲೆ ನಗರ ಕೇಂದ್ರೀಯ ಬಸ್ ನಿಲ್ದಾಣ, ನಗರ ಸಾರಿಗೆ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ‌ ಎನ್ನುತ್ತಿತ್ತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!