August 11, 2026
Tuesday, August 11, 2026
spot_img

ಧಾರಾಕಾರ ಮಳೆಗೆ ನಲುಗಿದ ಅಸ್ಸಾಂ: ಜಲಪ್ರಳಯಕ್ಕೆ 31 ಬಲಿ, ಹೈಅಲರ್ಟ್‌ನಲ್ಲಿ 16 ಜಿಲ್ಲೆಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ಅತ್ಯಂತ ವಿಕೋಪಕ್ಕೆ ತಿರುಗಿದೆ. ಮೇಘಸ್ಫೋಟದ ಪರಿಣಾಮವಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಒಂದೇ ದಿನದಲ್ಲಿ 21 ಜನರು ಜೀವ ಕಳೆದುಕೊಂಡಿದ್ದು, ಈ ವರ್ಷದ ಪ್ರವಾಹಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 31ಕ್ಕೆ ತಲುಪಿದೆ.

16 ಜಿಲ್ಲೆಗಳಲ್ಲಿ 5.64 ಲಕ್ಷ ಜನರಿಗೆ ಆಪತ್ತು

ರಾಜ್ಯದ 16 ಪ್ರಮುಖ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದೆ. ಸುಮಾರು 5.64 ಲಕ್ಷಕ್ಕೂ ಹೆಚ್ಚು ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಶಿವಸಾಗರ ಜಿಲ್ಲೆಯಲ್ಲಿ ಗರಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಚರೈದಿಯೋದಲ್ಲಿ 5, ಗೋಲಾಘಾಟ್‌ನಲ್ಲಿ 2 ಹಾಗೂ ಜೋರ್ಹಾಟ್‌ನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಭೀಕರ ಹಾನಿಗೊಳಗಾದ ಪ್ರದೇಶಗಳು

  • ಶಿವಸಾಗರ: 3,59,535 ಬಾಧಿತರು
  • ಜೋರ್ಹಾಟ್: 87,662 ಬಾಧಿತರು
  • ಚರೈದಿಯೋ: 72,646 ಬಾಧಿತರು

ಸಿಎಂ ಹಿಮಂತ ಬಿಸ್ವ ಶರ್ಮಾ ಸರಣಿ ಭೇಟಿ

ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಪ್ರವಾಹ ಪೀಡಿತ ಪ್ರದೇಶಗಳಾದ ನಜಿರಾ, ಸೋನಾರಿ, ತಿಯೋಕ್ ಮತ್ತು ಶಿವಸಾಗರದ ವಿವಿಧ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು. ಸಂತ್ರಸ್ತರಿಗೆ ತಕ್ಷಣದ ನೆರವು ಒದಗಿಸಲು ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !