ರಸ್ತೆ ದಾಟುತ್ತಿದ್ದ ಘೇಂಡಾಮೃಗಕ್ಕೆ ಟ್ರಕ್‌ ಡಿಕ್ಕಿ: ವಿಡಿಯೋ ಹಂಚಿಕೊಂಡು ಬೇಸರಿಸಿದ ಸಿಎಂ ಬಿಸ್ವಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಸ್ಸಾಂನ ಕಾಜಿರಂಗ ಅನಿಮಲ್ ಕಾರಿಡಾರ್‌ನಲ್ಲಿ ಘೇಂಡಾಮೃಗವೊಂದು ರಸ್ತೆ ದಾಟುತ್ತಿದ್ದಾಗ ಎದುರು ಭಾಗದಿಂದ ಬಂದ ಟ್ರಕ್‌ ಒಂದು ಡಿಕ್ಕಿ ಹೊಡೆದ ವೀಡಿಯೊವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಂಚಿಕೊಂಡು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ನೊಂದ ಪ್ರಾಣಿಯು ಕುಂಟುತ್ತಾ ಮರಳಿ ಅರಣ್ಯದತ್ತ ಹೋಗುವುದನ್ನು ವೀಡಿಯೊ ತೋರಿಸುತ್ತದೆ. ಈ ದೃಷ್ಯ ಮನಕಲಕುವಂತಿದೆ.
” ಇದೊಂದು ದುರಾದೃಷ್ಟಕರ ಘಟನೆ. ಘೇಂಡಾಮೃಗಕ್ಕೆ ಡಿಕ್ಕಿ ಹೊಡೆದ ಟ್ರಕ್ ಅನ್ನು ಆ ಬಳಿಕ ತಡೆದು ದಂಡ ವಿಧಿಸಲಾಗಿದೆ ಎಂದು ಸಿಎಂ ಬಿಸ್ವಾ ಬರೆದಿದ್ದಾರೆ. ಘೇಂಡಾಮೃಗಗಳು ನಮ್ಮ ವಿಶೇಷ ಸ್ನೇಹಿತರು. ಅವುಗಳಿಗೆ ಯಾವುದೇ ಸಮಸ್ಯೆಯಾಗುವುದನ್ನು ನಾವು ಸಹಿಸುವುದಿಲ್ಲ. ಕಾಜಿರಂಗದಲ್ಲಿ ಪ್ರಾಣಿಗಳನ್ನು ಕಾಪಾಡುವುದು ನಮ್ಮ ಸಂಕಲ್ಪವಾಗಿದೆ. ಈ ರೀತಿಯ ಅಪಘಾತಗಳನ್ನು ತಡೆಯಲು ಕಾಜಿರಂಗ ಹೆದ್ದಾರಿಯಲ್ಲಿ ವಿಶೇಷವಾದ 32 ಕಿಮೀ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

 

ಈ ಪೋಸ್ಟ್ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವೀಡಿಯೊ ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಾರು ರೀ ಟ್ವಿಟ್‌ ಗಳೊಂದಿಗೆ ವೈರಲ್ ಆಗಿದೆ.
ʼಪ್ರಾಣಿಗಳ ಆವಾಸಸ್ಥಾನದಲ್ಲಿ ಮನುಷ್ಯರ ಹಸ್ತಾಕ್ಷೇಪ ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿ ಹೆದ್ದಾರಿ ಸಂಚಾರಕ್ಕೆ ಅವಕಾಶ ಕಲ್ಪಿಸುವು ಸರಿಯಾದ ಕ್ರಮವಲ್ಲ. ಕೆಳಸೇತುವೆಗಳನ್ನು ನಿರ್ಮಿಸಿ ಪ್ರಣಿಗಳಿಗೆ ರಕ್ಷಣೆ ಕಲ್ಪಿಸಿ ಎಂದು ಪ್ರಾಣಿಪ್ರಿಯರು ಮನವಿ ಮಾಡಿದ್ದಾರೆ.

ನಿರ್ಬಂಧಿತ ಪ್ರದೇಶದಲ್ಲಿ ಅತಿವೇಗದ ಮಿತಿ ಮೀರಿ ವಾಹನ ಚಲಾಯಿಸುತ್ತಿದ್ದ ಚಾಲಕನಿಗೆ ದಂಡ ವಿಧಿಸಿದ ಮುಖ್ಯಮಂತ್ರಿಯ ನಡೆಯನ್ನು ಹಲವರು ಶ್ಲಾಘಿಸಿದ್ದಾರೆ. ವಾಹನದ ವೇಗ ಕಡಿಮೆಯಿದ್ದರೆ ಅಪಘಾತ ತಪ್ಪಿಸಬಹುದಿತ್ತು ಎಂದು ಜನರು ವಾದಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!