Wednesday, September 28, 2022

Latest Posts

ಅಸ್ಸಾಂನಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬಳಸಲಾಗುತ್ತಿದ್ದ ಮತ್ತೊಂದು ಮದರಸಾ ಧ್ವಂಸ; ಉಗ್ರರ ವಿರುದ್ಧ ಸಿಎಂ ಬಿಸ್ವಾ ಸಮರ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಬಾಂಗ್ಲಾದೇಶದ ಪ್ರಜೆ ಮತ್ತು ಅಲ್-ಖೈದಾ ಅಂಗಸಂಸ್ಥೆಯ ಸದಸ್ಯರಿಂದ ಬರ್ಪೇಟಾ ಜಿಲ್ಲೆಯಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಮದರಸಾವನ್ನು ಅಸ್ಸಾಂ ಸರ್ಕಾರವು ಬುಲ್ಡೋಜರ್ ಮಾಡಿದೆ.
2019ರಲ್ಲಿ ಸ್ಥಾಪನೆಯಾದಾಗಿನಿಂದಲೂ ಈ ಮದರಸಾವನ್ನು ರಾಜ್ಯದಲ್ಲಿ “ಜಿಹಾದಿ” ಚಟುವಟಿಕೆಗಳ ಕೇಂದ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಗಳು ಕೇಳಿಬಂದಿದ್ದವು. “ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ನಾವು ಅಸ್ಸಾಂನಲ್ಲಿ ಕೆಡವುತ್ತಿರುವ ಎರಡನೇ ಮದರಸಾ ಇದಾಗಿದೆ. ಈ ಸಂಸ್ಥೆಗಳನ್ನು ಭಯೋತ್ಪಾದನೆಯ ಕೇಂದ್ರವಾಗಿ ಬಳಸಲಾಗುತ್ತಿದೆ” ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಪೊಲೀಸರು ಮದರಸಾದ ಪ್ರಾಂಶುಪಾಲ ಮಹ್ಮುನೂರ್ ರಶೀದ್ ನನ್ನು ಕೂಡ ಬಂಧಿಸಿದ್ದಾರೆ.
ಇಮಾಮ್‌ಗಳ ಸೋಗಿನಲ್ಲಿ ಜಿಹಾದಿಗಳು ಒಳನುಗ್ಗಿ ರಕ್ಷಣೆ ಪಡೆದಿರುವುದನ್ನು ನಾವು ನೋಡುತ್ತಿದ್ದೇವೆ. ಈ ವ್ಯವಸ್ಥೆಯನ್ನು ಬುಡಸಮೇತ  ಸ್ವಚ್ಛಗೊಳಿಸಲು ನಾವು ಮುಸ್ಲಿಂ ಸಮುದಾಯದ ಸಹಾಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಅದಕ್ಕಾಗಿ ಅವರು ನಮಗೆ ಸಹಾಯ ಮಾಡುತ್ತಿದ್ದಾರೆ. ಮೂಲಭೂತವಾದಿಗಳು ಅವಿತುಕುಳಿತ ಮದರಸಾಗಳನ್ನೆಲ್ಲಾ ಧ್ವಂಸಗೊಳಿಸುತ್ತಿದ್ದೇವೆ. ನಾವು ಈಗಾಗಲೇ 700 ಕ್ಕೂ ಹೆಚ್ಚು ರಾಜ್ಯ ಅನುದಾನಿತ ಮದರಸಾಗಳನ್ನು ಮುಚ್ಚಿದ್ದೇವೆ ಎಂದು ಹಿಮಂತ್‌ ಬಿಸ್ವಾ ಹೇಳಿದ್ದಾರೆ.
ಅಸ್ಸಾಂ ಪೊಲೀಸ್ ಹೆಚ್ಚುವರಿ ಡಿಜಿಪಿ (ವಿಶೇಷ ಶಾಖೆ) ಹಿರೇನ್ ನಾಥ್ ಪ್ರತಿಕ್ರಿಯೆ ನೀಡಿದ್ದು, “ಇಂದು ಕೆಡವಲಾದ ಈ ಮದರಸಾದಲ್ಲಿ ಉಗ್ರ ಸಂಘಟನೆ ಎಬಿಟಿಯ ಇಬ್ಬರು ಸದಸ್ಯರು ತಂಗಿದ್ದರು” ಎಂದು ಹೇಳಿದ್ದಾರೆ. ಜೋಶಿಹಟಿಪಾರದಲ್ಲಿ ಕೆಡವಲ್ಪಟ್ಟ ಮದ್ರಸಾವಾದ ʼಶೈಖುಲ್ ಹಿಂದ್ ಮಹಮ್ಮದುಲ್ ಹಸನ್ ಜಮಿಯುಲ್ ಹುದಾ ಇಸ್ಲಾಮಿಕ್ ಅಕಾಡೆಮಿʼಯನ್ನು ಬಾಂಗ್ಲಾದೇಶದ ಸೈಫುಲ್ ಇಸ್ಲಾಂ ಅಲಿಯಾಸ್ ಎಂಡಿ ಸುಮನ್ ಎಂಬಾತ ಸ್ಥಾಪಿಸಿದ್ದಾನೆ. ಆತ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಮಾಡ್ಯೂಲ್‌ನ ನಾಯಕನಾಗಿದ್ದಾನೆ. ಈ ಸಂಘಟನೆಯು ಭಾರತದಲ್ಲಿ ನಿಷೇಧಿತ ಅಲ್‌ ಖೈದಾ ಜೊತೆಗೆ ಸಂಬಂಧವನ್ನು ಹೊಂದಿದೆ.
ಜಿಹಾದಿ ಸಂಘಟನೆಗೆ ಸೇರುವಂತೆ ಯುವಕರನ್ನು ಪ್ರೇರೇಪಿಸಲಾಗುತ್ತಿತ್ತು..
ಎಟಿಬಿಯ ಕನಿಷ್ಠ ಐವರು ಸದಸ್ಯರೊಂದಿಗೆ ಸೈಫುಲ್ ಅವರು 2018 ರಲ್ಲಿ ಬಾಂಗ್ಲಾದೇಶದಿಂದ ಭಾರತವನ್ನು ಪ್ರವೇಶಿಸಿದ್ದರು ಎಂದು ಮುಖ್ಯಮಂತ್ರಿ ಬಿಸ್ವಾ ಹೇಳಿದ್ದಾರೆ. ಸೈಫುಲ್ ನನ್ನು ಮಾರ್ಚ್ 4 ರಂದು ಬಂಧಿಸಲಾಗಿದ್ದರೂ, ಉಳಿದವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಬಾಂಗ್ಲಾದೇಶದ ನಾರಾಯಣಗಂಜ್ ಜಿಲ್ಲೆಯ ಅರೈಹಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಟಾಡಿ ಗ್ರಾಮದ ನಿವಾಸಿಯಾಗಿರುವ ಸೈಫುಲ್, 2019 ರಲ್ಲಿ ಅಸ್ಸಾಂಗೆ ತೆರಳುವ ಮೊದಲು ಉತ್ತರ ಪ್ರದೇಶಕ್ಕೆ ಮತ್ತು ನಂತರ ಪಶ್ಚಿಮ ಬಂಗಾಳಕ್ಕೆ ಪ್ರಯಾಣ ಬೆಳೆಸಿದ್ದ. ಆ ಬಳಿಕ ಇದೀಗ ಕೆಡವಲಾದ ಮದರಸಾ ಬಳಿಯ ಧಕಲಿಯಾಪರ ಮಸೀದಿಯಲ್ಲಿ ಅರೇಬಿಕ್ ಶಿಕ್ಷಕರಾಗಿ ತೊಡಗಿಸಿಕೊಂಡಿದ್ದ.
ಎನ್‌ಐಎ ಪ್ರಕಾರ, ಸೈಫುಲ್ ಯುವಕರನ್ನು ಜಿಹಾದಿ ಸಂಘಟನೆಗೆ ಸೇರಲು, ಸ್ಲೀಪರ್ ಸೆಲ್‌ಗಳನ್ನಾಗಿಸಲು ಮತ್ತು  ಅಲ್-ಖೈದಾ ಮತ್ತು ಭಾರತದಲ್ಲಿ ವಿವಿಧ ರೂಪದಲ್ಲಿರುವ ಉಗ್ರ ಸಂಘಟನೆಗಳೊಂದಿಗೆ ತೊಡಗಿಕೊಳ್ಳಲು ಪ್ರೇರೇಪಿಸುತ್ತಿದ್ದ. ಉಗ್ರರ ವಿರುದ್ಧ ಸಮರ ಸಾರಿರುವ ಸರ್ಕಾರ ಮೊರಿಗಾಂವ್ ಜಿಲ್ಲೆಯ ಮೊರಿಯಾಬರಿಯಲ್ಲಿ ಎಕ್ಯೂಐಎಸ್‌ ನ ನಿಧಿ ನಿರ್ವಾಹಕರು ನಡೆಸುತ್ತಿದ್ದ ಮದರಸಾವನ್ನು ಆಗಸ್ಟ್ 4 ರಂದು ಧ್ವಂಸಗೊಳಿಸಿತ್ತು. ಎಕ್ಯೂಐಎಸ್ ಸದಸ್ಯ ಮತ್ತು ಮದರಸಾದ ಶಿಕ್ಷಕ ಮುಫ್ತಿ ಮುಸ್ತಫಾ ಅವರನ್ನು ಜುಲೈ 27 ರಂದು ಬಂಧಿಸಲಾಯಿತು. ರಾಜ್ಯದ ಬಿಜೆಪಿ ಸರ್ಕಾರ ಇಸ್ಲಾಮಿಕ್ ಭಯೋತ್ಪಾದನಾ ಘಟಕಗಳ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಮತ್ತು ಇದುವರೆಗೆ ಐದು ಮಾಡ್ಯೂಲ್‌ಗಳನ್ನು ಭೇದಿಸಿ ಮಾರ್ಚ್‌ನಿಂದ ಈಚೆಗೆ 37 ಉಗ್ರರನ್ನು ಬಂಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!