ಹೊಸದಿಗಂತ ವರದಿ ಮಡಿಕೇರಿ:
ಆನೆಯ ಕಾಲು ಮೂಳೆ, ಗಜಮುತ್ತುವಿನಂತೆ ಇರುವ ಮೊಟ್ಟೆಯಾಕಾರದ ಮೂರು ವಸ್ತುಗಳು ಮತ್ತು ಗಜಮುತ್ತುವಿನಂತೆ ಇರುವ ಮುತ್ತೊಂದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಡಿಕೇರಿಯ ಬಸ್ ತಂಗುದಾಣವೊಂದರ ಬಳಿ ದಾಳಿ ನಡೆಸಿದ ಪೊಲೀಸರು ಮಾಲು ಸಹಿತ ಆರೋಪಿ ನಿಜಾಮುದ್ದಿನ್ ಎಂಬಾತನನ್ನು ವಶಕ್ಕೆ ಪಡೆದರು.
ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ಅವರ ನಿರ್ದೇಶನದಂತೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ, ಹೆಡ್ ಕಾನ್ಸ್ಟೇಬಲ್’ಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಮೋಹನ, ಕಾನ್ಸ್ಟೇಬಲ್’ಗಳಾದ ಸ್ವಾಮಿ ಹಾಗೂ ಮಂಜುನಾಥ ಕಾರ್ಯಾಚರಣೆ ನಡೆಸಿದರು.