ಕಾಂಗ್ರೆಸ್ ನಿಂದ ಅಲ್ಪಸಂಖ್ಯಾತರ ಹಕ್ಕನ್ನು ಕಸಿದುಕೊಳ್ಳುವ ಯತ್ನ: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮಾಜದಲ್ಲಿ ಒಡಕು ಮೂಡಿಸುವ ಕೆಲಸಕಾಂಗ್ರೆಸ್‌ ಪಕ್ಷವು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಛತ್ತೀಸ್‌ಗಢದ ಜಗದಲ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಜಿತ್ನಿ ಆಬಾದಿ, ಉತ್ನಾ ಹಕ್ ( ಒಂದು ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಹಕ್ಕುಗಳ ಪ್ರಮಾಣ ) ಎಂದು ಹೇಳುತ್ತಿದ್ದಾರೆ. ನನಗೆ ಮಾತ್ರ ದೇಶದ ಅತಿದೊಡ್ಡ ಜನಸಂಖ್ಯೆ ಎಂದರೆ ಬಡವರು. ಅವರ ಕಲ್ಯಾಣವೇ ನನ್ನ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎಂದು ಹೇಳುತ್ತಿದ್ದರು. ಆದರೆ, ಈಗ ಅಧಿಕ ಜನಸಂಖ್ಯೆಯನ್ನು ಹೊಂದಿರುವವರಿಗೆ ಮೊದಲ ಹಕ್ಕು ಎಂಬುದನ್ನು ಕಾಂಗ್ರೆಸ್ ಹೇಳುತ್ತಿದೆ. ಜನಸಂಖ್ಯೆಯು ಯಾರಿಗೆ ಮೊದಲ ಹಕ್ಕು ಎಂಬುದನ್ನು ನಿರ್ಧರಿಸುತ್ತದೆ. ಈಗ ಕಾಂಗ್ರೆಸ್ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತದೆಯೇ?’ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆಯೇ? ಬಹುಸಂಖ್ಯಾತ ಹಿಂದುಗಳು ಕಾಂಗ್ರೆಸ್ ಬಳಿಗೆ ಹೋಗಿ ಅವರ ಹಕ್ಕುಗಳನ್ನು ಕೇಳಬೇಕೇ? ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹಿಂದುಗಳನ್ನು ವಿಭಜಿಸಿ ಸಮಾಜದಲ್ಲಿ ತಾರತಮ್ಯವನ್ನು ಹೆಚ್ಚಿಸುವ ಮೂಲಕ ದೇಶವನ್ನು ನಾಶಮಾಡಲು ಬಯಸುತ್ತಿದೆ. ಅವರು ದೇಶಕ್ಕೆ ಬಡತನ ಬಿಟ್ಟು ಬೇರೇನನ್ನೂ ಕೊಟ್ಟಿಲ್ಲ ಎಂಬ ಟೀಕಾಪ್ರಹಾರ ಮಾಡಿದರು.

ಕಾಂಗ್ರೆಸ್ ನಲ್ಲಿ ಈಗ ಮೂಲ ಜನರಿಲ. ಆ ಪಕ್ಷದ ದೊಡ್ಡ ನಾಯಕರ ಬಾಯಿ ಮುಚ್ಚಿಸಲಾಗಿದೆ. ಅವರು ಏನನ್ನೂ ಮಾತನಾಡಲು ಧೈರ್ಯ ಮಾಡುತ್ತಿಲ್ಲ. ಕಾಂಗ್ರೆಸ್‌ ನಾಯಕತ್ವವನ್ನು ಹೊರಗುತ್ತಿಗೆ ನೀಡಲಾಗಿದೆ. ಕೆಲವರು ತೆರೆಮರೆಯಲ್ಲಿ ನಿಂತು ಪಕ್ಷವನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.ಯಾವುದೇ ಬೆಲೆ ತೆತ್ತಾದರೂ ಹಿಂದುಗಳನ್ನು ವಿಭಜಿಸುವ ಮೂಲಕ ದೇಶವನ್ನು ನಾಶ ಮಾಡಲು ಕಾಂಗ್ರೆಸ್ ಬಯಸುತ್ತಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಬಡವರನ್ನು ಒಡೆಯಲು ಬಯಸುತ್ತಿದೆ. ಅವರು ( ಕಾಂಗ್ರೆಸ್ ) ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಅವರಿಗೆ ಇಲ್ಲಿಗೆ ಬಂದು ನಿಮ್ಮ ಜೊತೆಗೆ ಮಾತನಾಡಲು ಸಮಯವಿಲ್ಲ. ಆದರೆ, ತಮ್ಮ ಸರ್ಕಾರವನ್ನು ಉಳಿಕೊಳ್ಳಲು ಮಾತ್ರ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ಯಾವುದೇ ಭ್ರಷ್ಟರು ಮೋದಿಯವರ ಕಣ್ಣಿಗೆ ಬೀಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಬರಲು ಹೆದರುತ್ತಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!