ಹೊಸದಿಗಂತ ವರದಿ ಕಾರವಾರ:
ಗೋವಾ ರಾಜ್ಯದಲ್ಲಿ ಉದ್ಯಮ ನಡೆಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಮೂಲದ ವ್ಯಕ್ತಿಯೋರ್ವರ ಮೇಲೆ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿಗಳಿಂದ ಗುಂಡಿನ ದಾಳಿ ನಡೆದಿದ್ದು ಅದೃಷ್ಟವಶಾತ್ ಅವರು ಪಾರಾಗಿದ್ದಾರೆ.
ಗೋವಾ ರಾಜ್ಯದಲ್ಲಿ ಉದ್ಯಮ ಹೊಂದಿರುವ ಯಲ್ಲಾಪುರ ಮೂಲದ ಶ್ರೀನಿವಾಸ ನಾಯಕರ ಮೇಲೆ ಅಪರಿಚಿತ ವ್ಯಕ್ತಿಗಳಿಬ್ಬರು ಗುಂಡು ಹಾರಿಸಿದ್ದು ತಕ್ಷಣ ಚುರುಕಿನ ಕ್ರಮ ಕೈಗೊಂಡ ಶ್ರೀನಿವಾಸ ನಾಯಕರ ಅಂಗರಕ್ಷಕರು ಪ್ರತಿದಾಳಿ ನಡೆಸಿದ್ದರಿಂದ ದುಷ್ಕರ್ಮಿಗಳ ಗುರಿ ತಪ್ಪಿದ್ದು ಅವರು ರಾಷ್ಟ್ರೀಯ ಹೆದ್ದಾರಿ ಬದಿಗೆ ಹಾರಿ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಶ್ರೀನಿವಾಸ ನಾಯಕ ಅವರು ಪಣಜಿ ಪರವರಿಯಲ್ಲಿರುವ ನ್ಯೂ ಮೆಜಿಸ್ಟಿಕ್ ಹೊಟೇಲಿನಿಂದ ತೆರಳುತ್ತಿದ್ದ ಸಂದರ್ಭದಲ್ಲಿ ಸಮೀಪದಲ್ಲೇ ಕಾದು ಕುಳಿತಿದ್ದ ದುಷ್ಕರ್ಮಿಗಳು ಅವರ ಸಮೀಪ ಬಂದು ಗುಂಡು ಹಾರಿಸುವ ಯತ್ನ ನಡೆಸುತ್ತಿರುವ ಸಂದರ್ಭದಲ್ಲೇ ನಾಯಕರ ಅಂಗರಕ್ಷಕರ ಕಡೆಯಿಂದ ಗುಂಡಿನ ದಾಳಿ ನಡೆದಿದ್ದು ದೃತಿಗೆಟ್ಟ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ:
ಯಲ್ಲಾಪುರ ಮೂಲದ ಶ್ರೀನಿವಾಸ ನಾಯಕ್ ಗೋವಾ ರಾಜ್ಯದ ವಿವಿಧ ಭಾಗಗಳಲ್ಲಿ ಸೇರಿದಂತೆ ವಿದೇಶಗಳಲ್ಲಿ ಕ್ಯಾಸಿನೋ ಉದ್ಯಮ ಹೊಂದಿದ್ದು ಪ್ರತಿದಿನ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದು, ವ್ಯವಹಾರಿಕ ದ್ವೇಷದ ಕಾರಣಕ್ಕೆ ಅವರ ಹತ್ಯೆಗೆ ಯತ್ನ ನಡೆಸಲಾಗಿತ್ತೇ ಎನ್ನುವ ಕುರಿತಂತೆ ತನಿಖೆಯಿಂದ ತಿಳಿದು ಬರಬೇಕಿದೆ.
ಗೋವಾ ಪೊಲೀಸ್ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಘಟನೆಯ ಕುರಿತಂತೆ ಪ್ರತಿಕ್ರಿಯಿಸಿದ್ದು ಉದ್ಯಮಿಗಳ ಮೇಲೆ ದಾಳಿ ಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಈ ಘಟನೆಯ ಹಿಂದೆ ಇರುವ ಪ್ರತಿಯೊಬ್ಬರನ್ನು ಬಂಧಿಸಿ ಕಂಬಿಗಳ ಹಿಂದೆ ಕಳುಹಿಸುವಂತೆ ರಾಜ್ಯದ ಪೊಲೀಸ್ ನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.



