September 13, 2026
Sunday, September 13, 2026
spot_img

ಆಫೀಸಿನಿಂದ ಬಂದ ಪತಿಯ ಮುಂದೆ ಹತ್ತಾರು ಪ್ರಶ್ನೆಗಳಿಟ್ಟು ಕಿರಿಕಿರಿ ಮಾಡಬೇಡಿ, ಅವರಿಗೂ ಸ್ವಲ್ಪ ಸ್ಪೇಸ್‌ ಕೊಡಿ!

ಇಡೀ ದಿನ ಮನೆಯಲ್ಲಿರುವ ಹೆಣ್ಣುಮಕ್ಕಳು ಹಾಗೂ ಕೆಲಸಕ್ಕೆ ಹೋಗಿ ಬಂದು ಗಂಡನಿಗಾಗಿ ಕಾಯುತ್ತಿದ್ದ ಹೆಣ್ಣುಮಕ್ಕಳಿಗೆ ಆತ ಆಫೀಸಿನಿಂದ ಬಂದ ತಕ್ಷಣ ಕೇಳಲು ನೂರಾರು ಪ್ರಶ್ನೆಗಳಿರುತ್ತವೆ. ಆದರೆ ಗಂಡ ಲೇಟಾಗಿ ಬಂದಿದ್ದಾನೆ ಆತನಿಗೆ ಸುಸ್ತಾಗಿದೆಯಾ ಅಥವಾ ಆತನ ದಿನ ಇಂದು ಚೆನ್ನಾಗಿತ್ತೋ ಇಲ್ಲವೋ ಎನ್ನುವುದನ್ನೂ ಯೋಚಿಸದೇ ನೂರಾರು ಪ್ರಶ್ನೆ, ಡಿಮ್ಯಾಂಡ್‌ ಹಾಗೂ ದೂರುಗಳನ್ನು ಮುಂದಿಡುತ್ತಾರೆ. ಆ ಕ್ಷಣಕ್ಕೆ ಗಂಡಸಿಗೆ ತಾನು ಯಾಕಾದರೂ ಮನೆಗೆ ಬಂದೆನೋ ಎನಿಸುವುದು ಸಾಮಾನ್ಯವಾಗಿದೆ. ಆಫೀಸಿನಲ್ಲಿಯೂ ನೆಮ್ಮದಿ ಇಲ್ಲ, ಮನೆಯಲ್ಲಿಯೂ ಹೆಂಡತಿ ಕಾಟ ಎಂದು ಅಂದುಕೊಳ್ಳುವಂತೆ ಮಾಡಬೇಡಿ.

ಇನ್ನು ಮನೆಯಲ್ಲಿ ಮಕ್ಕಳಿದ್ದರಂತೂ ತಾಯಂದಿರು ಇಡೀ ದಿನ ಅವರ ಜೊತೆ ಇದ್ದು ಹೈರಾಣಾಗಿರುತ್ತಾರೆ. ಎಷ್ಟೊತ್ತಿಗೆ ಗಂಡ ಆಫೀಸಿನಿಂದ ಬರುತ್ತಾರೋ ಮಗುವನ್ನು ಅವರ ಕೈಗೆ ಕೊಟ್ಟು ಸ್ವಲ್ಪ ಸಮಯ ರೆಸ್ಟ್‌ ಮಾಡಿದರೆ ಸಾಕು ಎಂದುಕೊಳ್ತಾರೆ. ಆಫೀಸಿನಿಂದ ಬಂದ ಗಂಡನನ್ನು ಸ್ವಲ್ಪ ಸಮಯ ಹಾಗೇ ಬಿಟ್ಟುಬಿಡಿ. ತದನಂತರ ಮಾತು ಆರಂಭಿಸಿ. ನಾವು ಇಡೀ ದಿನ ಮನೆಯಲ್ಲಿ ಮಗು ನೋಡಿಕೊಂಡು ಸುಸ್ತಾಗಿರುತ್ತೀವಿ. ನಮ್ಮನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ನಿಮ್ಮ ವಾದವಾಗಿರಬಹುದು. ಆದರೆ ನಿಮ್ಮನ್ನು ನೋಡಿಯೇ ಸುಸ್ತಾಗಿದ್ದೀರಿ ಎನ್ನೋದು ಅವರಿಗೆ ಗೊತ್ತಿರುತ್ತದೆ. ಸ್ವಲ್ಪ ಸಮಯ ಕೊಡಿ ಅವರೇ ನಿಮ್ಮನ್ನು ಆರೈಕೆ ಮಾಡುತ್ತಾರೆ. ಆಫೀಸಿನಿಂದ ಮನೆಗೆ ಬಂದ ಗಂಡನನ್ನು ಹೇಗೆ ಟ್ರೀಟ್‌ ಮಾಡ್ಬೇಕು? ಇಲ್ಲಿದೆ ಡೀಟೇಲ್ಸ್‌..

ಪತಿ ಮನೆಗೆ ಬರುವ ಮುನ್ನ ಸಾಧ್ಯವಾದಷ್ಟು ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳಿ. ಮನೆಯಷ್ಟೇ ಅಲ್ಲ ನೀವು ಕೂಡ ಮುಖ ತೊಳೆದು ಸಣ್ಣ ಮಟ್ಟಿಗೆ ರೆಡಿಯಾಗಿ, ತಲೆಬಾಚಿಕೊಂಡು ಕುಳಿತುಕೊಳ್ಳಿ. ಮನೆಗೆ ಬಂದ ಪತಿ ಆಫೀಸಿನಲ್ಲಿ ಎಂತಹ ದಿನ ಕಳೆದಿದ್ದಾರೋ ಗೊತ್ತಿಲ್ಲ. ಆದರೆ ಮನೆಗೆ ಬಂದ ತಕ್ಷಣವೇ ನೆಮ್ಮದಿಯ ಭಾವನೆ ಅವರಲ್ಲಿ ಮೂಡಬೇಕು.

ಕೆಟ್ಟ ದಿನ ಅನುಭವಿಸಿದ ನಂತರ ಪತಿ ಬಂದು ಶೂ ಕೂಡ ತೆಗೆಯದೇ ಸೋಫಾ ಮೇಲೆ ಕುಳಿತಿದ್ದಾರೆ ಎಂದುಕೊಳ್ಳಿ. ಶೂ ತೆಗಿ ಸಾಕ್ಸ್‌ ಬಿಚ್ಚು, ಗಲೀಜು, ಬಂದ ತಕ್ಷಣ ಮುಖ ತೊಳೆಯೋಕೆ ಆಗೋದಿಲ್ವಾ? ಕಾಮನ್‌ ಸೆನ್ಸ್‌ ಇಲ್ವಾ? ಮನೆಯಲ್ಲಿ ಮಕ್ಕಳಿದ್ದಾರೆ ನಿನ್ನನ್ನು ನೋಡಿ ಏನನ್ನು ಕಲೀತಾರೆ ಎಂದೆಲ್ಲಾ ಕಿರುಚಾಡಬೇಡಿ. ಒಂದು ದಿನ ಅವರಿಗೆ ಹೇಗೆ ಬೇಕೋ ಹಾಗಿರಲಿ ಬಿಟ್ಟುಬಿಡಿ.

ಅತ್ತೆಯ ಜೊತೆ ಆದ ಜಗಳ, ಕೆಲವರ ಜೊತೆ ಆದ ವಾದವಿವಾದ, ಗಂಡ ಮರೆತ ಕೆಲವು ಕೆಲಸಗಳ ಬಗ್ಗೆ ತಕ್ಷಣ ಮಾತಾಡೋಕೆ ಶುರು ಮಾಡ್ಬೇಡಿ. ಕರೆಂಟ್‌ ಬಿಲ್‌ ಇನ್ನೂ ಯಾಕೆ ಕಟ್ಟಿಲ್ಲ? ನಿಮ್ಮಮ್ಮ ಇವತ್ತು ಮಗುಗೆ ಐಸ್‌ಕ್ರೀಂ ತಿನ್ನಿಸಿದಾರೆ ಇಂತಹ ದೂರುಗಳನ್ನು ಹೇಳೋದಕ್ಕೆ ಸ್ವಲ್ಪ ಸಮಯ ಕಾಯಿರಿ. ಆನಂತರ ಮಾತನಾಡಿ.

ದಿನವಿಡೀ ದುಡಿದ ಬಂದ ಅವರಿಗೆ ಅರ್ಧ ಗಂಟೆ ಅವರೇನು ಮಾಡುತ್ತಾರೋ ಅದನ್ನು ಮಾಡಲು ಬಿಟ್ಟುಬಿಡಿ. ಸಮಸ್ಯೆ, ಡಿಮ್ಯಾಂಡ್‌ ಹಾಗೂ ಇನ್ನಿತರ ವಿಷಯಗಳು ಅರ್ಧ ಗಂಟೆ ಕಾಯಬಹುದು.

ಪ್ರೀತಿಯಿಂದ ಸ್ಮೈಲ್‌ ಮಾಡಿ. ಒಂದೊಳ್ಳೆ ಹಗ್‌ ಕೊಟ್ಟು ಬ್ಯಾಗ್‌ ತೆಗೆದುಕೊಳ್ಳಿ. ಸುಸ್ತಾಗಿ ಬಂದ ಗಂಡನಿಗೆ ಸ್ವಲ್ಪ ಪ್ಯಾಂಪರ್‌ ಮಾಡೋದ್ರಲ್ಲಿ ತಪ್ಪೇನು ಇಲ್ಲ. ಮನೆ ಎಂದರೆ ಖುಷಿ, ಒತ್ತಡದಲ್ಲಿದ್ದಾಗ ಬಂದು ಸೇರಬಹುದಾದ ನೆಮ್ಮದಿಯ ತಾಣ ಎನಿಸಲಿ. ಒಂದು ಲೋಟ ಬಿಸಿ ಬಿಸಿ ಕಾಫಿ, ಟೀ ಅಥವಾ ನೀರು ಕೊಡಿ. ಅವರು ಎದ್ದು ಫ್ರೆಶ್‌ ಅಪ್‌ ಆಗಿ ಮನೆಯ ವಾತಾವರಣಕ್ಕೆ ಸೆಟ್‌ ಆಗುವವರೆಗೂ ಕಾಮನ್‌ ಮಾತುಕತೆ ಬಿಟ್ಟು ಇನ್ನೇನೂ ಮಾಡಬೇಡಿ.

ಅವರೇ ಆಫೀಸಿನಲ್ಲಿ ಏನಾಯ್ತು ಎಂದು ಹೇಳೋವರೆಗೂ ಕಾಯಿರಿ. ಒಳ್ಳೆಯ ಕೇಳುಗಾರನಾಗಿ. ನಿಧಾನಕ್ಕೆ ನಿಮ್ಮ ದಿನ ಇಂದೇನಾಯ್ತು ಎಲ್ಲವನ್ನೂ ನೀವೂ ಹೇಳಿಕೊಳ್ಳಿ. ಊಟದ ಟೇಬಲ್‌ ಇಂಟ್ರೋಗೇಷನ್‌ ಟೇಬಲ್‌ ಆಗದಿರಲಿ. ಸಾವಿರ ಪ್ರಶ್ನೆಯಿಂದ ಅವರಿಗೆ ಹಿಂಸೆ ನೀಡಬೇಡಿ. ಕೂಲ್‌ ಹಾಗೂ ಕಾಮ್‌ ಆದ ಮಾತುಕತೆಗಳು ಇರಲಿ.





Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !